2026ರ ಜನವರಿ ತಿಂಗಳಿಗೆ ದೇವರು ಕೊಟ್ಟ ಹೊಸ ವರ್ಷದ ಪ್ರವಾದನೆಯ ವಾಗ್ದಾನವು " ಪುನಸ್ಥಾಪನೆಯ ಏದೆನ್"

 2026ರ ಜನವರಿ ತಿಂಗಳಿಗೆ ದೇವರು ಕೊಟ್ಟ ಹೊಸ ವರ್ಷದ ಪ್ರವಾದನೆಯ ವಾಗ್ದಾನವು  "ಪುನಸ್ಥಾಪನೆಯ ಏದೆನ್"

 ಯೇಸುವಿನ ನಾಮದಲ್ಲಿ ಇದನ್ನು ಓದುತ್ತಿರುವ ಪ್ರತಿಯೊಬ್ಬ ಸಹೋದರ ಮತ್ತು ಸಹೋದರಿಯರಿಗೆ ಮೊದಲನೆಯದಾಗಿ ಹೊಸ ವರ್ಷದ ಶುಭಾಶಯಗಳು.

ಈ ಸಂದೇಶವನ್ನು ಓದುವುದರ  ಮೂಲಕ ದೇವರು ನಿಮಗಾಗಿ ಇಟ್ಟಿರುವ ಜೀವಿತವನ್ನು, ಯಾವ ಪ್ರಯಾಸವು ಇಲ್ಲದೆ ತೃಪ್ತಿಯಾಗಿ ಅನುಭವಿಸುವಂತೆ ನಿಮ್ಮ ನಂಬಿಕೆಯನ್ನು ಹೆಚ್ಚಿಸಲಿ ಎಂದು ಯೇಸುವಿನ ನಾಮದಲ್ಲಿ ಡಿಕ್ಲೇರ್ ಮಾಡುತ್ತೇನೆ.

2026ರಲ್ಲಿ ನಾವು ಅನುಭವಿಸಬೇಕಾಗಿರುವ ಕಾರ್ಯಗಳನ್ನು ಮತ್ತು ಪ್ರಕಟಣೆಗಳನ್ನು ನೋಡಿಕೊಳ್ಳೋಣ. ಇದರ ಬಗ್ಗೆ ನೀವು ಏನನ್ನು ಮಾಡುವ ಅವಶ್ಯಕತೆ ಇಲ್ಲ, ಆದರೆ ಈ ಕಾರ್ಯಗಳು ನಿಮ್ಮಲ್ಲಿ ಹೇಗೆ ಕೆಲಸ ಮಾಡುತ್ತದೆ? ಮತ್ತು ನಿಮ್ಮ ಜೀವಿತದಲ್ಲಿ ಹೇಗೆ ಅನುಭವಿಸಬೇಕು? ಎನ್ನುವ ಸತ್ಯವನ್ನು ಈಗ ನಿಮಗೆ ತಿಳಿಸುತ್ತೇನೆ.

 ಈ ವರ್ಷದ ವಾಗ್ದಾನದ ವಚನ:

ಯೆಹೆಜ್ಕೇಲ 47:9

ಈ ತೊರೆಯು ಎಲ್ಲೆಲ್ಲಿ ಹರಿಯುತ್ತದೋ ಅಲ್ಲಲ್ಲಿ ಗುಂಪುಗುಂಪಾಗಿ ಚಲಿಸುವ ಸಕಲವಿಧ ಜಲಜಂತುಗಳು ಬದುಕಿಬಾಳುವವು; ಮೀನುಗಳು ತಂಡೋಪತಂಡವಾಗಿರುವವು. ಈ ನೀರು ಸಮುದ್ರಕ್ಕೆ ಬೀಳಲು [ಆ ನೀರೂ] ಸಿಹಿಯಾಗುವದು; ಈ ತೊರೆಯು ಎಲ್ಲೆಲ್ಲಿ ಹರಿದರೂ ಅಲ್ಲಲ್ಲಿ ಜೀವವುಂಟಾಗುವದು.

 ಈ ವಚನದ ಪ್ರಕಟಣೆಗಿಂತ ಮೊದಲು ಮೂಲ ಏನು ಎಂದು ತಿಳಿದುಕೊಳ್ಳೋಣ. 

ದೇವರ ಮೂಲ ಉದ್ದೇಶ ಹೇಗಿತ್ತು?, ಮನುಷ್ಯನ ಪಾಪದ ನಿಮಿತ್ತವಾಗಿ ಅದು ಹೇಗೆ ಕುಸಿದು ಬಿತ್ತು?, ಅದಕ್ಕೆ ತಾತ್ಕಾಲಿಕ ಪರಿಹಾರವನ್ನು ಇಟ್ಟರು, ಆದರೆ ಅದು ಕೆಲಸ ಮಾಡದೆ ಹೋದಾಗ,  ನಿರಂತರವಾದ ಕಾರ್ಯವನ್ನು ಹೇಗೆ ಸ್ಥಾಪಿಸಿದರು?, ಎನ್ನುವ ವಿಷಯವನ್ನು ವಚನಗಳ ಮೂಲಕ ತಿಳಿದುಕೊಳ್ಳೋಣ.

 ಈ ವಾಕ್ಯದಲ್ಲಿ ಎಲ್ಲೆಲ್ಲಿ ನದಿ ಹರಿಯುತ್ತದೆ ಅಲ್ಲಲ್ಲಿ ಜೀವ ಉಂಟಾಗುತ್ತಾ ಇದೆ. ಇದರಲ್ಲಿ ಮುಖ್ಯವಾದ ಪದ ಏನೆಂದರೆ, " ಹರಿಯುವುದು "

 ನೀರು ಒಂದೇ ಜಾಗದಲ್ಲಿ ಇದ್ದರೆ, ಅಲ್ಲಿರುವವರು ಮಾತ್ರ ಅದನ್ನು ಉಪಯೋಗಿಸಬಹುದು, ತುಂಬಾ ದಿನ ಒಂದೇ ಕಡೆ ಇದ್ದರೆ ನೀರು ವಿಷವಾಗುತ್ತದೆ, ಕೆಟ್ಟು ಹೋಗುತ್ತದೆ, ಕ್ರಿಮಿ ಕೀಟಗಳು ಉಂಟಾಗುತ್ತವೆ.

 ಹರಿಯುವ ನೀರು ಯಾವಾಗಲೂ ಆರೋಗ್ಯವಾಗಿರುತ್ತದೆ. ನಮ್ಮ ಜೀವಿತದಲ್ಲಿ ನಾವು ಆಶೀರ್ವಾದವಾಗಿ ಇರಬೇಕೆಂದರೆ, " ನಮ್ಮಲ್ಲಿರುವ ಪವಿತ್ರಾತ್ಮನ ಕ್ರಿಯೆಗಳು, ನಮ್ಮಲ್ಲಿ ಅವನ ಹರಿಯುವಿಕೆ ಯಾವ ಹಂತದಲ್ಲಿದೆ?, ಯಾವ ವೇಗದಲ್ಲಿದೆ ಮತ್ತು ಯಾವ ಮಾರ್ಗದಲ್ಲಿ ಹರಿಯುತ್ತಿದೆ? ಎನ್ನುವುದು ಬಹಳ ಮುಖ್ಯವಾಗಿದೆ. 

 ಯಾವ ಪ್ರದೇಶದಲ್ಲಿ ನೀವು ಬಲಹೀನರಾಗಿದ್ದೀರಿ, ಆ ಪ್ರದೇಶದಲ್ಲಿ ಪವಿತ್ರಾತ್ಮನ ಹರಿವು ಕಡಿಮೆಯಾಗಿದೆ. ಯಾಕೆಂದರೆ ಪವಿತ್ರಾತ್ಮನು ಮತ್ತು ಅವನ ಕ್ರಿಯೆ ಇಲ್ಲದೆ, ಆ ಸ್ಥಳದಲ್ಲಿ ದೇವರ ಮಹಿಮೆ ಪ್ರಕಟವಾಗಲು ಸಾಧ್ಯವಿಲ್ಲ.

 ಇದನ್ನು ಕುರಿತಾಗಿ ಇನ್ನೊಂದು ವಚನವನ್ನು ನೋಡಿಕೊಳ್ಳೋಣ.

ಆದಿಕಾಂಡ 2:10  

ಏದೆನ್ ಸೀಮೆಯಲ್ಲಿ ಒಂದು ನದಿ ಹುಟ್ಟಿ ಆ ವನವನ್ನು ತೋಯಿಸುತ್ತಿತ್ತು. ಅದು ಆಚೇ ಕಡೆಯಲ್ಲಿ ಒಡೆದು ನಾಲ್ಕು ಶಾಖೆಗಳಾಯಿತು.

 ಇಲ್ಲಿ ಏದೆನ್ - ದೇವರು

 ನದಿ- ದೇವರ ವಾಕ್ಯ

 ಏದೆನ್ ನಲ್ಲಿ ಒಂದು ನದಿ ಹುಟ್ಟಿ, ಆ ನದಿ ತೋಟದ ಕಡೆಗೆ ಹರಿದು, ಆ ತೋಟಕ್ಕೆ ಜೀವ  ಕೊಟ್ಟು, ಆ ತೋಟ ಆರೋಗ್ಯವಾಗಿರುವಂತೆ, ಆಶೀರ್ವಾದವಾಗಿರುವಂತೆ ಮತ್ತು ಫಲ ಕೊಡುವಂತೆ ಮಾಡುತ್ತದೆ. ಆ ತೋಟ ಮಾತ್ರ ಅನುಭವಿಸುವುದಲ್ಲದೆ, ಇನ್ನು ನಾಲ್ಕು ಕಡೆಗೆ  ಹರಿದು, ಇಡೀ ಭೂಮಿಯನ್ನೇ ತೋಯಿಸಿ ಎಲ್ಲೆಲ್ಲಿ ಮರ ಇದೆಯೋ, ಗಿಡ ಇದೆಯೋ, ತೋಟ ಇದೆಯೋ ಅಲ್ಲಲ್ಲಿ ನೀರು ಹರಿದು ಅಲ್ಲಿ ಜೀವವನ್ನು ಉಂಟು ಮಾಡಿ ಯಾವ ರೀತಿ ಈ ತೋಟ ಆರೋಗ್ಯವಾಗಿದೆ ಅದರಂತೆ ಭೂಮಿಯಲ್ಲಿ ಎಲ್ಲಾ ತೋಟಗಳು ಆರೋಗ್ಯವಾಗಿರುವಂತೆ ದೇವರು ಸೃಷ್ಟಿಸಿದ್ದಾರೆ. 

 ತೋಟದಲ್ಲಿರುವ ಮರ ಮನುಷ್ಯನನ್ನು ಸೂಚಿಸುತ್ತದೆ. ಅಲ್ಲಿರುವ ಮರ ನೀರಿಗಾಗಿ ಪ್ರಯತ್ನಪಟ್ಟಿಲ್ಲ, ದುಡಿದಿಲ್ಲ, ಅದು ಆರೋಗ್ಯವಾಗಿರಲು, ಚೆನ್ನಾಗಿರಲು ಮತ್ತು ಫಲ ಕೊಡಲು ವ್ಯತ್ಯಾಸವಾಗಿ ಏನನ್ನು ಮಾಡಲಿಲ್ಲ. ತೋಟದ ಕಡೆಗೆ ನದಿ ಹರಿದು ಬಂತು.

 ಈ ತೋಟ ಎಂಬ ನೀವು ಮತ್ತು ನಾನು, ಆ ನದಿ ಎಂಬ ವಾಕ್ಯ ಪವಿತ್ರಾತ್ಮನ ಮೂಲಕ ಹರಿದು ಬಂದು,  ನಮ್ಮನ್ನು ತುಂಬಿಸುವಾಗ,  ಆಶೀರ್ವಾದವಾಗಿ ಅನುಭವಿಸುತ್ತಾ ಇದ್ದೇವೆ. ದೇವರ ಫಲವನ್ನು ನಾನು ಮಾತ್ರ ಅನುಭವಿಸದೆ, ನನ್ನಿಂದ ಬೇರೆಯವರು ಆಶೀರ್ವಾದವಾಗಿರುವಂತೆ ಹರಿಯಲೇಬೇಕು. 

 Presence- ದೇವರ ಪ್ರಸನ್ನತೆಯಲ್ಲಿರುವುದು 

 Receiving ನಾವು ಅನುಭವಿಸುವುದು 

 Overflowing ನಮ್ಮಲ್ಲಿ ತುಂಬಿ ಹರಿಯುವುದು 

 Distributing ಬೇರೆಯವರಿಗೆ ಹಂಚಿಕೊಡುವುದು 

 ಇದಕ್ಕೆ ಆಧಾರವಾಗಿ ಒಂದು ವಾಕ್ಯವನ್ನು ನೋಡಿಕೊಳ್ಳೋಣ.

ಪ್ರವಾದಿ ಯೆರೆಮೀಯನ ಗ್ರಂಥ 17:8

ನೀರಾವರಿಯಲ್ಲಿ ನೆಡಲ್ಪಟ್ಟು ಹೊಳೆಯ ದಡದಲ್ಲಿ ತನ್ನ ಬೇರುಗಳನ್ನು ಹರಡಿ ದಗೆಗೆ ಭಯಪಡದೆ ಹಸುರೆಲೆಯನ್ನು ಬಿಡುತ್ತಾ ಕ್ಷಾಮ ವರ್ಷದಲ್ಲಿಯೂ ನಿಶ್ಚಿಂತೆಯಾಗಿ ಸದಾ ಫಲಕೊಡುತ್ತಾ ಇರುವ ಮರಕ್ಕೆ ಸಮಾನನಾಗಿರುವನು.

 ನಂಬಿಕೆಯನ್ನು ಬೆಳೆಸಿಕೊಳ್ಳುವುದಕ್ಕಾಗಿ ಪ್ರಯತ್ನ ಪಡುವುದಲ್ಲ, ಪ್ರಯಾಸ ಪಡುವುದಲ್ಲ, ಕೆಲಸ ಮಾಡುವುದಲ್ಲ,  "ನದಿ" ಎಂಬ ವಾಕ್ಯ ನಿನ್ನ ಕಡೆಗೆ ಹರಿದು ಬರುವಾಗ ನೀನು ಅದರ ಬಳಿಯಲ್ಲಿ ಇದ್ದರೇನೇ ಸಾಕು. ನೀನು ಆರೋಗ್ಯವಾಗಿಯೇ ಇರುತ್ತೀಯ, ಆಶೀರ್ವಾದವಾಗಿಯೇ ಇರುತ್ತೀಯ ಮತ್ತು ಜಯವಾಗಿಯೇ ಎಂದು ದೇವರ ವಾಕ್ಯ ಹೇಳುತ್ತದೆ. 

 ಮರ ನೀರಿನ ಬಳಿಯಲ್ಲಿ ನೆಡಲ್ಪಟ್ಟಿದ್ದರೆ ಸಾಕು. ಅದರಂತೆಯೇ ನೀವು "ನೀರು" ಎಂಬ ವಾಕ್ಯದ ಬಳಿಯಲ್ಲಿ ನೆಡಲ್ಪಟ್ಟಿರುವುದರಿಂದ ಬೇರೆ ಯಾವ ಅರ್ಹತೆ ಮತ್ತು ಯೋಗ್ಯತೆಯ ಅಗತ್ಯವಿಲ್ಲ.

 ನೀವು "ವಾಕ್ಯ" ಎಂಬ ನೀರಿನ ಬಳಿಯಲ್ಲಿ ನೆಡಲ್ಪಟ್ಟಿರುವುದರಿಂದ ಆ ಮರ ಯಾವಾಗಲೂ ಆಶೀರ್ವಾದವಾಗಿ, ಸಮೃದ್ಧಿಯಾಗಿ ಮತ್ತು ಜಯವಾಗಿ ಇರುತ್ತದೆ ಎಂದು ಯೇಸುವಿನ ನಾಮದಲ್ಲಿ ಡಿಕ್ಲೇರ್  ಮಾಡುತ್ತೇನೆ. 

ನಿಯಮ: ದೇವರಿಂದ ಉಂಟಾದದ್ದು ಮಾತ್ರವೇ ಮನುಷ್ಯನಿಗೆ ಆಶೀರ್ವಾದ. ದೇವರಿಂದ ಬರದೇ ಇರುವುದು ಮನುಷ್ಯನಿಗೆ ಆಶೀರ್ವಾದವಾಗಿರಲು ಸಾಧ್ಯವೇ ಇಲ್ಲ.

 ಯಾಕೆಂದರೆ ಮತ್ತಾಯ 15: 13 ರ ಪ್ರಕಾರ ಅದಕ್ಕೆ ಆತನು – “ಪರಲೋಕದಲ್ಲಿರುವ ನನ್ನ ತಂದೆಯು ನೆಡದೆ ಇರುವ ಗಿಡಗಳೆಲ್ಲಾ ಬೇರಿನೊಂದಿಗೆ ಕಿತ್ತುಹಾಕಲ್ಪಡುವವು.

 ದೇವರ ವಾಕ್ಯವಾಗಿರುವ ನದಿಯ ಬಳಿಯಲ್ಲಿ ನೀವು ಇರುವ ತನಕವೇ ನಿಮಗೆ ಜೀವ.

 ನಾಲ್ಕು ನದಿಗಳ ಹೆಸರು ಅರ್ಥ ಮತ್ತು ಪ್ರಕಟಣೆಯನ್ನು ನೋಡಿಕೊಳ್ಳೋಣ.

ಆದಿಕಾಂಡ 2:11-14

ಮೊದಲನೆಯದರ ಹೆಸರು ಪೀಶೋನ್: ಅದು ಬಂಗಾರ ದೊರಕುವ ಹವೀಲ ದೇಶವನ್ನೆಲ್ಲಾ ಸುತ್ತುವದು. ಆ ದೇಶದ ಬಂಗಾರವು ಶ್ರೇಷ್ಠವಾದದ್ದು; ಅಲ್ಲಿ ಬದೋಲಖ ಧೂಪವೂ ಗೋಮೇಧಿಕ ರತ್ನವೂ ಸಿಕ್ಕುತ್ತವೆ. ಎರಡನೆಯ ನದಿಯ ಹೆಸರು ಗೀಹೋನ್; ಅದು ಕೂಷ್ ದೇಶವನ್ನೆಲ್ಲಾ ಸುತ್ತುವದು. ಮೂರನೆಯ ನದಿಯ ಹೆಸರು ಹಿದ್ದೆಕೆಲ್; ಅದು ಅಶ್ಶೂರ್ ದೇಶದ ಮುಂದೆ ಹರಿಯುವದು. ನಾಲ್ಕನೆಯದು ಯೂಫ್ರೇಟೀಸ್ ನದಿ.


 ಮೊದಲನೆಯ ನದಿಯ ಹೆಸರು ಪೀಶೋನ್ - ಹೆಚ್ಚಳ ಸಮೃದ್ಧಿ ಐಶ್ವರ್ಯ 

 ಹವೀಲ ಊರಿಗೆ ಹರಿಯಿತು ಅದರಲ್ಲಿ ಬಂಗಾರ ಇತ್ತು. ಬಂಗಾರ ಎನ್ನುವದು ಐಶ್ವರ್ಯ ಮತ್ತು ಸಮೃದ್ಧಿಯನ್ನು ತೋರಿಸುತ್ತದೆ 

 ಬದೋಲಕ ದ್ರವ್ಯ ಅಂದರೆ ಒಂದು ಬೆಲೆ ಬಾಳುವ ಸುಗಂಧ ದ್ರವ್ಯ. ಇದು ಪ್ರಾರ್ಥನೆ ಮತ್ತು ಆರಾಧನೆಯನ್ನು ಸೂಚಿಸುತ್ತದೆ. 

ಗೋಮೇ ದಿಕ ರತ್ನ ಎನ್ನುವ ಕಲ್ಲು ಅಧಿಕಾರವನ್ನು ತೋರಿಸುತ್ತದೆ.

 ಬಂಗಾರ ಅಂದರೆ ದೇವರಿಂದ ಹುಟ್ಟಿದವನು. ದೇವರಿಂದ ಸೃಷ್ಟಿಸಲ್ಪಟ್ಟವನು.  ದೇವರೇ ನನಗೆ ಆಧಾರ. ದೇವರಿಂದಲೇ ನನಗೆ ಜೀವ ಎಂಬ ಗುರುತು. 

 ಅಂಥವನು ಯಾವಾಗಲೂ ದೇವರನ್ನು ಆರಾಧನೆ ಮಾಡುತ್ತಲೇ ಇರುತ್ತಾನೆ. ದೇವರ ಪ್ರಸನ್ನತೆಯಲ್ಲಿ ಇರುತ್ತಾನೆ.

 ನಿಯಮ: ಯಾವಾಗಲೂ ದೇವರ ಪ್ರಸನ್ನತೆಯಲ್ಲಿಯೇ ಇದ್ದು ದೇವರನ್ನು ಆರಾಧನೆ ಮಾಡುತ್ತಲೇ ಇರುವ ವ್ಯಕ್ತಿ ಭೂಮಿಯಲ್ಲಿ ಅಧಿಕಾರದಿಂದ ಆಳ್ವಿಕೆ ಮಾಡುತ್ತಲೇ ಇರುತ್ತಾನೆ.

 ಈ ಭೂಮಿಯಲ್ಲಿ ದೇವರು ಕೊಟ್ಟಿರುವ ಅಧಿಕಾರ ಅಲ್ಲದೆ ಬೇರೆ ಒಂದು ಅಧಿಕಾರ ಕೆಲಸ ಮಾಡಲು ಸಾಧ್ಯವಿಲ್ಲ. ನೀವು ಅಧಿಕಾರದಲ್ಲಿ ಇರಬೇಕು ಅಂದರೆ ನೀವು ಆತನಲ್ಲಿ, ಆತನ ಪ್ರಸನ್ನತೆಯಲ್ಲಿ, ಆರಾಧನೆ ಮಾಡುತ್ತಲೇ ಇರಬೇಕು, ಆತನನ್ನು ಕೊಂಡಾಡುತ್ತಲೇ ಇರಬೇಕು, ಆತನನ್ನು ಆರಾಧಿಸುತ್ತಲೇ ಇರಬೇಕು. ಆತನನ್ನು ಆರಾಧಿಸಬೇಕು ಅಂದರೆ ನಿಮ್ಮ ಗುರುತು ಆತನಲ್ಲಿರಬೇಕು.

 ಅದಕ್ಕಾಗಿ ನಿಮ್ಮ ಮತ್ತು ನನ್ನ ಗುರುತು ಏಸುಕ್ರಿಸ್ತನಲ್ಲಿಯೇ ಇದೆ.

 ಎರಡನೆಯ ನದಿಯ ಹೆಸರು ಗೀಹೋನ್: ಬಲ ಸಾಮರ್ಥ್ಯ ಶಕ್ತಿ 

 ಅದು ಕೂಷ್ ದೇಶಕ್ಕೆ ಹರಿಯಿತು. ಕೂಷ್ ಅಂದರೆ ಕತ್ತಲೆ ಇರುವ ಜಾಗ. ಕತ್ತಲೆ ಅನ್ನೋದು ಸಮಸ್ಯೆ, ಕಷ್ಟ , ಒಡೆದು ಹೋಗಿರುವ ಮತ್ತು ಎಲ್ಲಾ ಕೆಟ್ಟ ಕಾರ್ಯಗಳನ್ನು ಸೂಚಿಸುತ್ತದೆ. 

 ಇಲ್ಲಿ ತೋಟದಿಂದ ನೀರು ಹರಿದು ಕೂಷ್ ಗೆ ಹೋಗುತ್ತಿದೆ. ಅಂದರೆ ಎಲ್ಲಿ ಕತ್ತಲೆ ಇದೆಯೋ, ಎಲ್ಲಿ ಅನುಕೂಲವಾಗಿಲ್ಲವೋ ಅದನ್ನು ಒಡೆದು ನಿರ್ಮೂಲ ಮಾಡುವ ಬಲವನ್ನು ಹೊಂದಿದ್ದೇವೆ ಎಂದು ಅರ್ಥ. ಹೇಳಲು ಆಗದಿರುವ ಜಾಗದಲ್ಲಿ ಹೋಗಿ, ಮುರಿಯಲು ಆಗದೇ ಇರುವುದನ್ನು ಮುರಿದು, ಎಲ್ಲ ಕತ್ತಲೆಯ ಕಾರ್ಯಗಳನ್ನು ನಿರ್ಮೂಲ ಮಾಡುವ ಒಂದು ನದಿ.

 ಮೂರನೆಯ ನದಿಯ ಹೆಸರು : ಹಿದ್ದೆಕೆಲ್ 

ಇದಕ್ಕೆ ಇನ್ನೊಂದು ಹೆಸರು ಟೈಗ್ರಸ್ : ದೇವರ ವೇಗ ಮತ್ತು ಮಾರ್ಗ 

 ನಾಲ್ಕನೇಯ ನದಿಯ ಹೆಸರು : ಯೂಫ್ರೇಟೀಸ್ ಫಲಭರಿತರಾಗಿರುವುದು.


          ಏದೆನ್ ನಲ್ಲಿ ಒಂದು ನದಿ ಹುಟ್ಟಿ, ತೋಟಕ್ಕೆ ಹರಿಯಿತು. ತೋಟ ಅನುಭವಿಸಿದ  ಮೇಲೆ ನಾಲ್ಕು ಕಡೆ ಹರಿಯಿತು. ಒಂದು ನದಿ ಹರಿಯುವಾಗ ಸಮೃದ್ಧಿ ಸಂಪತ್ತು ಐಶ್ವರ್ಯ ಉಂಟಾಯಿತು. ಇನ್ನೊಂದು ನದಿ ಹರಿಯುವಾಗ ಕತ್ತಲೆ ಇರುವ ಜಾಗದಲ್ಲಿ ನಿರ್ಮೂಲ ಮಾಡುವ ಬಲ ಇತ್ತು. ಮೂರನೆಯ ನದಿ ಸರಿಯಾದ ಮಾರ್ಗದಲ್ಲಿ ವೇಗವಾಗಿ ನಡೆಯುವ ಸಾಮರ್ಥ್ಯ ಇತ್ತು. ನಾಲ್ಕನೇಯ ನದಿ ಫಲಭರಿತರಾಗಿರುವ ಕಾರ್ಯ ಇತ್ತು. 

 ಈಗ ಈ ನಾಲ್ಕು ಅಂಶಗಳು, ಗುಣಗಳು ಮತ್ತು ಕಾರ್ಯಗಳು ನಮ್ಮಲ್ಲಿಯೇ ಇವೆ. 

 ನಾವು ಎಷ್ಟು ವಿಶೇಷವಾದವರು. ನಾವು ನಮ್ಮ ಬಲದಿಂದ ಜೀವಿಸುತ್ತಿಲ್ಲ. ನಮ್ಮ ಉಸಿರಲ್ಲ. ನಾವು ಉಂಟಾಗಿರುವುದೇ ದೇವರಿಂದ. ಮತ್ತು ದೇವರಿಂದ ಉಂಟಾದ ಕಾರ್ಯದಿಂದ ಜೀವಿಸುತ್ತಿದ್ದೇವೆ ಎಂಬ  ತಿಳುವಳಿಕೆ ಉಂಟಾದರೆ ಸಾಕು. ನಮ್ಮ ಜೀವಿತದಲ್ಲಿ ಎಲ್ಲವೂ ಬದಲಾವಣೆಯಾಗಿ ಬಿಡುತ್ತದೆ.  

 ಒಂದು ಉದಾಹರಣೆಯ ಮೂಲಕ ಇದನ್ನು ನೋಡಿಕೊಳ್ಳೋಣ.

 ನಾನು ಒಬ್ಬ ಸಹೋದರನಿಗೆ ಹೇಳುತ್ತೇನೆ, " ಬೆಳಗಾವಿಗೆ ಹೋಗಿ ಅಲ್ಲಿ ಒಬ್ಬರು ಕಾಯಿಲೆಯಲ್ಲಿದ್ದಾರೆ,  ಅವರನ್ನು ಸ್ವಸ್ಥಪಡಿಸಿ ಬನ್ನಿ" ಎಂದು. 

 ಅವರು ಹೇಳುತ್ತಾರೆ, " ಅಷ್ಟು ದೂರ ಹೇಗೆ ಹೋಗಲಿ ಪಾಸ್ಟರ್?" ಎಂದು.

 ನಾನು ಹೇಳುತ್ತೇನೆ, " ಕಾರ್ ತೆಗೆದುಕೊಂಡು ಹೋಗಿ" ಎಂದು. 

 ಇದರ ಅರ್ಥ ಏನೆಂದರೆ : ಇಲ್ಲಿ "ಕಾರ್" ಎನ್ನುವುದು ಪೀಶೋನ್

 ದೇವರ ಉದ್ದೇಶವನ್ನು ನೆರವೇರಿಸಲು ಬೇಕಾಗಿರುವ ಕಾರ್ಯವನ್ನು ಕೂಡ ದೇವರೇ ನಮಗೆ ಕೊಟ್ಟು ಕಳಿಸುತ್ತಾರೆ ಎನ್ನುವುದೇ ಪೀಶೋನ್.  ಪೀಶೋನ್ ಎಂದರೆ ಹೆಚ್ಚಳ, ಸಮೃದ್ಧಿ, ಐಶ್ವರ್ಯ, ಬಂಗಾರ .

 ಪೀಶೋನ್ ನಲ್ಲಿ ನೀನು ನನ್ನಿಂದ ಹುಟ್ಟಿದವನು ಎಂಬ ಗುರುತು ಇದ್ದರೆ, ನನ್ನಲ್ಲಿಯೆ ಹುಟ್ಟಿದ್ದರೆ ನೀನು ನನ್ನಲ್ಲಿ ವಾಸಿಸಿ, ನನ್ನನ್ನೇ ಆರಾಧನೆ ಮಾಡಿ, ನನ್ನ ಅಧಿಕಾರವೇ ನಿನಗೆ ಇರುವುದು. ನಿನಗೆ ಏನು ಬೇಕು ಅದು ನಿನಗೆ ಸಿಗುವುದು .

 ಈಗ ಸಹೋದರ ಗಾಡಿ ಓಡಿಸಿಕೊಂಡು ಹೋಗುತ್ತಿದ್ದಾರೆ. ದಾರಿಯಲ್ಲಿ ಬೆಟ್ಟ ಇದೆ. ದಾರಿಯೇ ಇಲ್ಲ, ಕಲ್ಲು ಬಂಡೆಗಳು ಇವೆ.  ಕತ್ತಲೆ ಎಂಬ ಸಮಸ್ಯೆ ಮುಂದೆ ಇದೆ. ಇದೇ ಕೂಷ್

 ದೇವರು ಒಂದು ಉದ್ದೇಶವನ್ನು ಕೊಟ್ಟು, ಅದನ್ನು ನಡೆಸುವಾಗ ಅದಕ್ಕೆ ಎದುರಾಗಿ ಬರುವ ತಡೆಗಳನ್ನು ನಿರ್ಮೂಲ ಮಾಡುವ ಬಲ, ಸಾಮರ್ಥ್ಯ ಮತ್ತು ಶಕ್ತಿಯನ್ನು ಕೊಟ್ಟು, ಈಗ ದೇವರೇ ನಿನ್ನಲ್ಲಿದ್ದು ನಿನ್ನನ್ನು ನಡೆಸುತ್ತಿದ್ದಾರೆ. ಈಗ ಬೆಟ್ಟ ಗುಡ್ಡ ಕೆಸರು ಎಲ್ಲಾ ಕಡೆಯೂ ಸುಲಭವಾಗಿ ಹತ್ತಿಕೊಂಡು ಹೋಗುತ್ತಲೇ ಇರುವಂಥ ಬಲವನ್ನು ಕೊಡುತ್ತಾರೆ. ಇದೇ ಗಿಹೋನ್ 

 ಇಷ್ಟು ಮಾತ್ರ ಅಲ್ಲ ಬೆಳಗಾವಿಗೆ ಸಮಯಕ್ಕೆ ಸರಿಯಾಗಿ ಹೋಗಬೇಕು. ಅಲ್ಲಿ ಅವರು ಅಸ್ವಸ್ಥತೆ ಯಲ್ಲಿ ಇದ್ದಾರೆ.

 ಈಗ ಟೈಗ್ರಸ್ ದೇವರ ವೇಗದಲ್ಲಿ ಕಾರನ್ನು ವೇಗವಾಗಿ ಓಡಿಸುವುದು ಮಾತ್ರವಲ್ಲ, ಸರಿಯಾದ ಮಾರ್ಗದಲ್ಲಿ ವೇಗವಾಗಿ ಹೋಗಬೇಕು. ಅಷ್ಟು ಮಾತ್ರ ಅಲ್ಲ ಸರಿಯಾಗಿ ಎಲ್ಲಿಗೆ ಹೋಗಬೇಕು, ಆ ಮಾರ್ಗವನ್ನು ಕೂಡ ಪವಿತ್ರಾತ್ಮನೇ ನಿನಗೆ ತೋರಿಸಿ ಹಿದ್ದೆಕಲ್  ಎಂಬ ನದಿ ನಿಮ್ಮನ್ನು  ನಡೆಸಿ, ಅದು ನಿಮ್ಮನ್ನು ಓಡಿಸಿ, ನಡೆಸುತ್ತಾ ಇರುವುದು. ದೇವರ ವೇಗದಲ್ಲಿ, ದೇವರ ಮಾರ್ಗದಲ್ಲಿ , ಸರಿಯಾಗಿ ಹೋಗಿ ನೀವು ಆ ವ್ಯಕ್ತಿಗೆ - "ಯೇಸುವಿನ ನಾಮದಲ್ಲಿ ನೀನಗೆ ಸ್ವಸ್ಥತೆ  ಆಗಲಿ"  ಎಂದು ಹೇಳುವುದು ಫಲ ಕೊಡುವ ವಿಷಯ. ಇದೇ ಯೂಫ್ರೇಟೀಸ್ 

 ಯೋಚಿಸಿ: ನಿಮಗೆ ಕಾರ್ ಕೊಟ್ಟು, ದಾರಿಯಲ್ಲಿ ಬಲವನ್ನು ಕೊಟ್ಟು, ತಡೆಗಳನ್ನು ನಿರ್ಮೂಲ ಮಾಡಿ, ವೇಗವಾಗಿ ಹೋಗಿ, ಸರಿಯಾದ ಮಾರ್ಗದಲ್ಲಿ ಹೋಗಿ ಅಲ್ಲಿ ಸ್ವಸ್ಥತೆ ಉಂಟಾಗಲಿಲ್ಲ ಅಂದರೆ ಇದೆಲ್ಲವೂ ವ್ಯರ್ಥ .

 ಆದರೆ ದೇವರು ಏನು ಹೇಳುತ್ತಿದ್ದಾರೆ ಗೊತ್ತಾ?

 ನಿನ್ನನ್ನು ನಾನು ಸೃಷ್ಟಿಸಿರುವುದೇ ನಿನ್ನಲ್ಲಿ ನನ್ನ ಬಲವನ್ನು ನೋಡಬೇಕು ಎಂದು ನೀವು ಈ ಭೂಮಿಯಲ್ಲಿ ಜೀವಂತವಾಗಿ ಶರೀರದಲ್ಲಿ ಇದ್ದೀರಿ ಎಂದರೆ ನೀವು ಫಲ ಕೊಡುವವರಾಗಿದ್ದೀರಿ. ಫಲ ಕೊಡಬೇಕು ಎಂದು ಹೇಳುತ್ತಿಲ್ಲ, ಫಲ ಕೊಡುವವರಾಗಿಯೇ ನಿಮ್ಮನ್ನು ಸೃಷ್ಟಿಸಿದ್ದಾರೆ.

ಯೆಹೆಜ್ಕೇಲ 47:9

 ಈ ತೊರೆಯು ಎಲ್ಲೆಲ್ಲಿ ಹರಿಯುತ್ತದೋ ಅಲ್ಲಲ್ಲಿ ಗುಂಪುಗುಂಪಾಗಿ ಚಲಿಸುವ ಸಕಲವಿಧ ಜಲಜಂತುಗಳು ಬದುಕಿಬಾಳುವವು; ಮೀನುಗಳು ತಂಡೋಪತಂಡವಾಗಿರುವವು. ಈ ನೀರು ಸಮುದ್ರಕ್ಕೆ ಬೀಳಲು [ಆ ನೀರೂ] ಸಿಹಿಯಾಗುವದು; ಈ ತೊರೆಯು ಎಲ್ಲೆಲ್ಲಿ ಹರಿದರೂ ಅಲ್ಲಲ್ಲಿ ಜೀವವುಂಟಾಗುವದು.

 ಇಲ್ಲಿ "ನದಿ" ಎನ್ನುವುದು "ಯೇಸುವನ್ನು" ಸೂಚಿಸುತ್ತದೆ. ಯೇಸುವೇ ಹರಿಯಬೇಕು. ಯೇಸು ಹರಿಯುವಾಗ ಸತ್ತುಹೋಗಿರುವ ಸಮುದ್ರದಲ್ಲಿಯೂ ಕೂಡ ಮೀನಿಗೆ ಜೀವ ಉಂಟಾಗುವುದು. 

 ಮೀನುಗಳು ಅಂದರೆ ಮನುಷ್ಯ 

ಸತ್ತ ಸಮುದ್ರ ಅಂದರೆ ಮರಣದ ಪರಿಸ್ಥಿತಿ 

 ಇವತ್ತು ನಿಮಗೆ ಹಣಕಾಸು ಸತ್ತುಹೋಗಿದೆಯಾ? 

 ನಿಮ್ಮ ಕೆಲಸ ಸತ್ತುಹೋಗಿದೆಯಾ ?

 ನಿಮ್ಮ ಮದುವೆ ಸತ್ತುಹೋಗಿದೆಯಾ? 

 ಯಾವ ಯಾವ ಕಾರ್ಯದಲ್ಲಿ ಸತ್ತುಹೋಗಿರುವ ಪರಿಸ್ಥಿತಿ ಇದೆಯೋ, ಅಲ್ಲಿ ಯೇಸು  ಎಂಬ ಜೀವದ ಆತ್ಮ  ಹರಿದರೆ ಸಾಕು ಜೀವ ಉಂಟಾಗಿ ಬಿಡುವುದು. 

 2026ರಲ್ಲಿ ನೀವು ಯಾರು ಕಾರಣಗಳನ್ನು ಹುಡುಕುವ ಅವಶ್ಯಕತೆ ಇಲ್ಲ, ಯಾಕೆ ತಡವಾಗುತ್ತಿದೆ  ಎಂದು ಪ್ರಶ್ನೆ ಕೇಳುವ ಅವಶ್ಯಕತೆ ಇಲ್ಲ. ಯಾಕೆ ಇದು ನೆರವೇರುತ್ತಿಲ್ಲ ಎಂದು ಪ್ರಶ್ನೆ ಕೇಳುವ ಅವಶ್ಯಕತೆ ಇಲ್ಲ, ನಾನೇನು ತಪ್ಪು ಮಾಡಿದೆ, ಪಾಪ ಮಾಡಿದೆ ಎಂದು ಪ್ರಶ್ನೆ ಕೇಳುವ ಅವಶ್ಯಕತೆ ಇಲ್ಲ. ದೇವರು ನನ್ನನ್ನು ಕೈ ಬಿಟ್ಟುಬಿಟ್ಟರ ಎಂದು ಹೇಳುವ ಅವಶ್ಯಕತೆ ಇಲ್ಲ. 

 ಯೇಸುವಿನ ನಾಮದಲ್ಲಿ ಈಗ ಓದುತ್ತಿರುವ ಆ ನದಿ ನಿಮ್ಮಲ್ಲಿ ಆ ನದಿ ಹರಿಯುತ್ತಾ ಇರುವುದರಿಂದ ನಿಮ್ಮ ಕಾರ್ಯಗಳು ಎಲ್ಲವೂ ದೇವರ ಉದ್ದೇಶದ ಪ್ರಕಾರ ಕ್ರಮವಾಗಿ, ಸರಿಯಾಗಿ, ಆಶೀರ್ವಾದವಾಗಿ ಮತ್ತು ಜಯವಾಗಿ ನಡೆಯುವುದು ಎಂದು ಯೇಸುವಿನ ನಾಮದಲ್ಲಿ ಡಿಕ್ಲೇರ್  ಮಾಡುತ್ತೇನೆ.

 ಯೇಸುವಿನ ನಾಮದಲ್ಲಿ ಎಲ್ಲೆಲ್ಲಿ ವಾಕ್ಯ ಎಂಬ ನೀರು ನದಿ ಹರಿಯುತ್ತಿದೆಯೋ ಅಲ್ಲಿ ಜೀವ ಉಂಟಾಗುತ್ತಿದೆ ಎಂದು  ಯೇಸುವಿನ ನಾಮದಲ್ಲಿ ಡಿಕ್ಲೇರ್ ಮಾಡುತ್ತೇನೆ.

 ಇಲ್ಲಿ ಗಮನಿಸಬೇಕಾಗುವ ವಿಷಯ ಏನೆಂದರೆ, ಈ ನದಿ ಬಂದು ನೀನು ಹೀಗೆ ಇದ್ದರೆ ಮಾತ್ರ ನಾನು ಸ್ವಸ್ತತೆ ಕೊಡುತ್ತೇನೆ. ನೀನು ಇದನ್ನು ನನಗಾಗಿ ಮಾಡಿದರೆ ಮಾತ್ರ ನಾನು ನಿನಗೆ ಸ್ವಸ್ಥತೆ ಕೊಡುತ್ತೇನೆ ನೀನು ಪರಿಶುದ್ಧವಾಗಿದ್ದರೆ ಮಾತ್ರ ನಾನು ನಿನಗೆ ಜೀವವನ್ನು ಕೊಡುತ್ತೇನೆ ಎಂದು ಹೇಳಲಿಲ್ಲ. ಎಲ್ಲೆಲ್ಲಿ ಇದು ಹರಿಯುತ್ತದೆಯೋ  ಅಲ್ಲಲ್ಲಿ ಸತ್ತಿರುವ ಎಲ್ಲವೂ ಜೀವಂತವಾಗಿರುವುದು.

 ಈಗ ಯೇಸು ಹೇಳುತ್ತಿದ್ದಾರೆ ನಾನು ಬಂದರೆ ನೀನು ಸತ್ತಿದ್ದರು ಜೀವವಾಗಿ ಎದ್ದೇಳಲೇಬೇಕು. ನಾನು ಬಂದರೆ ನಿನ್ನ ವ್ಯವಹಾರ ನಷ್ಟವಾಗಿದ್ದರೆ ಲಾಭವಾಗಿ ನಡೆಯಲೇಬೇಕು. ನಾನು ಬಂದರೆ ನಿನ್ನ ಶರೀರ ಆರೋಗ್ಯವಾಗಿರಲೇಬೇಕು. ಯೇಸುವಿನ ನಾಮದಲ್ಲಿ ಯಾವ ಸಹೋದರಿಯರಿಗೆ ಗರ್ಭ ಇಲ್ಲವೋ, ಮಗು ಇಲ್ಲವೋ, ಸಮಸ್ಯೆಯಲ್ಲಿದ್ದಾರೋ, ಅವರೆಲ್ಲರಿಗೂ ಈಗ ಈ ಯೇಸು ಎಂಬ ನದಿ ಹರಿಯುತ್ತಿರುವುದರಿಂದ ಮಗು ಉಂಟಾಗಿದೆ ಎಂದು ಯೇಸುವಿನ ನಾಮದಲ್ಲಿ ಡಿಕ್ಲೇರ್ ಮಾಡುತ್ತೇನೆ. 

 ಯೇಸುವಿನ ನಾಮದಲ್ಲಿ ಎಲ್ಲೆಲ್ಲಿ ಮನಸ್ಸು ಒಡೆದು ಹೋಗಿದೆಯೋ, ಎಲ್ಲೆಲ್ಲಿ ಪರಿಸ್ಥಿತಿಗಳು ಸರಿ ಇಲ್ಲವೋ ಅಲ್ಲಿ ಈ ನದಿ ಹರಿದರೆ ಸಾಕು ಎಲ್ಲವೂ ಸರಿಯಾಗಿದೆ ಎಂದು ಯೇಸು ಹೇಳುತ್ತಿದ್ದಾರೆ. 

 ಇದರಲ್ಲಿ ಯಾವುದು ಕೂಡ ನಮ್ಮ ಒಪ್ಪಿಗೆಯನ್ನು ಕೇಳುತ್ತಿಲ್ಲ, ಪ್ರಶ್ನೆಯನ್ನು ಕೇಳುತ್ತಿಲ್ಲ, ನಿನಗೆ ಅರ್ಹತೆ ಇದೆಯಾ ಎಂದು ಮಾತಾಡುತ್ತಿಲ್ಲ, ನೀನು ಎಷ್ಟು ಕಷ್ಟಪಟ್ಟೆ ಎಂದು ಕೇಳುತ್ತಿಲ್ಲ, ನೀನು ಸಂಪೂರ್ಣವಾಗಿ ಇದ್ದೀಯ ಎಂದು ನೋಡುತ್ತಿಲ್ಲ, ಆದರೆ ನಾನು ಹರಿದರೆ ಸಾಕು ನೀನು ಜೀವವಾಗಿಯೇ ಇರಬೇಕು ಎಂದು ವಾಕ್ಯವೆಂಬ ಆತನು ಹೇಳುತ್ತಿದ್ದಾನೆ. 

 ಈ ನದಿ ಹರಿಯುವಾಗ ಅದರ ಬಳಿಯಲ್ಲಿ ನೀನು ಇದ್ದರೆ ನಿನ್ನನ್ನು ಪ್ರಶ್ನೆಯನ್ನೇ ಕೇಳುವುದಿಲ್ಲ. ನಿನ್ನ ನಂಬಿಕೆ ಇದೆ ಎಂದು ಕೇಳುವುದಿಲ್ಲ, ವಿಶ್ವಾಸ ಇದೆಯಾ ಎಂದು ಕೇಳುವುದಿಲ್ಲ, ಭಕ್ತಿಯಿಂದ ಇದ್ದೀಯಾ ಎಂದು ಕೇಳುವುದಿಲ್ಲ, 

ಆದರೆ ನಾನು ಬಂದಿದ್ದೇನೆ, ನೀನು ಆಶೀರ್ವಾದವಾಗಿರಲೇಬೇಕು. 

ನಾನು ಬಂದಿದ್ದೇನೆ ನೀನು ಬಿಡುಗಡೆಯಿಂದ ಇರಲೇಬೇಕು. 

ನಾನು ಬಂದಿದ್ದೇನೆ ನೀನು ಆರೋಗ್ಯವಾಗಿ ಇರಲೇಬೇಕು.

 ನಾನು ಬಂದಿದ್ದೇನೆ ನೀನು ಐಶ್ವರ್ಯದಲ್ಲಿ ಇರಲೇಬೇಕು. 

ಗಲಾ 5:25

ನಾವು ಆತ್ಮನಿಂದ ಜೀವಿಸುತ್ತಿರಲಾಗಿ ಆತ್ಮನನ್ನನುಸರಿಸಿ ನಡೆಯೋಣ.

 ಈ ವಾಕ್ಯದ ಅರ್ಥ ಏನೆಂದರೆ ವಾಕ್ಯ ಎಂಬ ನದಿಯ ಬಳಿಯಲ್ಲಿ ಇದ್ದರೆ ನಮ್ಮ ಸ್ವಭಾವ ಆ ನೀರಿನ ಸ್ವಭಾವವೇ ಆಗಿರುತ್ತದೆ. ಇದೇ ದೇವರ ಮೂಲ ವಿನ್ಯಾಸ ಮತ್ತು ನೀಲನಕ್ಷೆಯಾಗಿದೆ.

 ಉದಾಹರಣೆಗೆ ಯಾವಾಗಲೂ ನಾನು ಏಳರಷ್ಟು ಆಶೀರ್ವಾದವಾಗಿರಿ ಎಂದು ಮನಪೂರ್ವಕವಾಗಿ ಆಶೀರ್ವದಿಸುತ್ತೇನೆ. ನೀವು ಅದೇ ರೀತಿ ಮಾಡಿ ಎಂದು ಎಷ್ಟೋ ಸಲ ಹೇಳಿದ್ದೇನೆ. ಇಲ್ಲಿ ನಾಲ್ಕು ಕಡೆ ನದಿ ಪಾರ್ಟ್ ಆಗುವುದಕ್ಕೆ ಮೊದಲು ತೋಟವನ್ನು ತುಂಬಿರಬೇಕು. "ಏಳರಷ್ಟು ನೀನು ಆಶೀರ್ವಾದವಾಗಿ ಇರು" ಎಂದು ನಾನು ಹೇಳಿದರೆ, ಏಳರಷ್ಟು ಸಾಮರ್ಥ್ಯ ಮೊದಲು ನನ್ನಲ್ಲಿ ತುಂಬಿರಬೇಕು. ಎಂಟರಷ್ಟು ಇದ್ದು ಏಳರಷ್ಟು ಕೊಟ್ಟರು ನನ್ನ ಸಾಮರ್ಥ್ಯ ಎಂಟರಷ್ಟು ಇರುವಾಗ  ಅದರಲ್ಲಿ ಏಳರಷ್ಟು ಬಿಡುಗಡೆ ಮಾಡುತ್ತಾ ಇದ್ದೇನೆ.

 "ನೀವು ಇನ್ನೊಬ್ಬರಿಗೆ ಆಶೀರ್ವಾದವಾಗಿ ಇರಬೇಕು" ಎನ್ನುವುದು ಮನುಷ್ಯ ಹೇಳುವ ನಿಯಮ ಅಲ್ಲ. ಅದೇ ದೇವರ ಮೂಲ ವಿನ್ಯಾಸ ನೀಲನಕ್ಷೆ. ಇದರ ಪ್ರಕಾರವೇ ಪವಿತ್ರಾತ್ಮನು ನನ್ನನ್ನು ನಡೆಸುತ್ತಾ ಇರುವುದರಿಂದ, ನಾನು ಏನೇ ಮಾಡಿದರು  ಸ್ವಂತ ಲಾಭಕ್ಕಾಗಿ ಅಲ್ಲ.

 ಆದರೆ  ಅದರ ಫಲವನ್ನು ಶರೀರ ಅನುಭವಿಸುತ್ತಾ ಇದೆ. 

 ದೇವರಿಂದ ಉಂಟಾದ ನದಿ ತೋಟಕ್ಕೆ ಹರಿದು ನಾಲ್ಕು ಕಡೆ ಭಾಗವಾಗುವ ಮೊದಲು ಆ ತೋಟ ತೃಪ್ತಿಯಾಗಿ ಅನುಭವಿಸಿದ ಮೇಲೆ, ಅಲ್ಲಿಂದ ಹರಿಯುತ್ತಾ ಬೇರೆಯವರಿಗೆ ಭಾಗವಾಗುತ್ತದೆ. 

ಇಲ್ಲಿ ಒಂದು ಸತ್ಯ ಏನೆಂದರೆ ಆ ನದಿ ತೋಟಕ್ಕೆ ಹರಿಯುತ್ತಿಲ್ಲ ಆ ನದಿ ಹರಿಯುವ ಕಡೆ ತೋಟ ಇದ್ದು, ಅದು ಹರಿಯುತ್ತಿರುವ ದಾರಿಯಲ್ಲಿ ಆ ಮರಗಳು ಇರುವುದರಿಂದ ಅವು ಆಶೀರ್ವಾದವಾಗಿಯೇ ಇವೆ. ಆ ನದಿಯ ಸ್ವಭಾವವೇನೆಂದರೆ ಹರಿಯುತ್ತಲೇ ಇರುವುದು. ಅದರ ಬಳಿಯಲ್ಲಿ ಎಲ್ಲೆಲ್ಲಿ ಮರಗಳಿವೆ ಅವುಗಳೆಲ್ಲವೂ ಅದರ ಫಲವನ್ನು ಅನುಭವಿಸುತ್ತಲೇ ಇರುತ್ತವೆ. ದೇವರು ನದಿಯನ್ನು ನಿಮ್ಮಲ್ಲಿ ನಿಂತು ಹೋಗುವ ರೀತಿಯಲ್ಲಿ ಕಳುಹಿಸುತ್ತಿಲ್ಲ. ನಿಮ್ಮ ಮೂಲಕ ಹರಿಯುವ ಹಾಗೆ ದೇವರು ಕಳುಹಿಸುತ್ತಾ ಇದ್ದಾರೆ. ನಿಮ್ಮ ಮೂಲಕ ಅಂದರೆ ನೀವು ಅನುಭವಿಸಿ ಇನ್ನೊಬ್ಬರಿಗೆ ಆಶೀರ್ವಾದವಾಗಿರುವುದು. ನೀವು ಯಾವಾಗ ಬಾಗಿಲನ್ನು ಮುಚ್ಚಿ ಬಿಟ್ಟು, " ನನಗೆ ಬಂದಿದೆ ದೇವರೇ, ನನಗೆ ಮಾತ್ರ ಸಾಕು" ಅಂತ ಹೇಳಿದರೆ ಕೊಳೆತು ಹೋಗುತ್ತೀರಿ.

 ಒಂದು ಗಿಡವನ್ನು ನೆಟ್ಟು, ಅದಕ್ಕೆ ಬರುವ ನೀರು ಮುಂದೆ ಹೋಗದೆ, ಅಲ್ಲಿಯೇ ತುಂಬಿ, ಹಾಗೆ ಇದ್ದರೆ ಅದು ಕೊಳೆತು ಹೋಗುತ್ತದೆ.

 ನಿಯಮ : ದೇವರಿಂದ ಹರಿಯುವುದು ಮಾತ್ರವೇ ಜೀವವನ್ನು ಕೊಡಲು ಸಾಧ್ಯ 

ತೊರೆಯ ಎರಡು ದಡಗಳಲ್ಲಿಯೂ ಇರುವ ಸಕಲ ಫಲವೃಕ್ಷಗಳಲ್ಲಿ ಹಣ್ಣು ತೀರದು, ಅದರ ಎಲೆ ಬಾಡಿ ಹೋಗುವುದಿಲ್ಲ, ಪ್ರತಿ ತಿಂಗಳು ಹೊಸಹೊಸ ಹಣ್ಣುಗಳನ್ನು ಕೊಡುತ್ತಲಿರುವವು. ಹಣ್ಣುಗಳು ಆಹಾರಕ್ಕೂ, ಸೊಪ್ಪು ಔಷಧಕ್ಕೂ ಅನುಕೂಲವಾಗುವವು.

 ಯಾಕೆಂದರೆ ಅದು ಲೋಕದ ನೀರಿನಿಂದ ಉತ್ಪತ್ತಿಯಾದದ್ದಲ್ಲ, ಆಲಯ ಎಂಬ ಯೇಸುವೇ ನೀರಾಗಿ ಹರಿಯುತ್ತಿರುವುದರಿಂದ, ಹಣ್ಣು ಆಹಾರವನ್ನು ಮತ್ತು ಎಲೆಗಳು ಔಷಧಿಯಾಗಿ ಆರೋಗ್ಯವನ್ನು ತೋರಿಸುತ್ತದೆ.

 ಉದಾಹರಣೆ : ಕೆಲಸ ಮಾಡಿ ಸಂಬಳ ತೆಗೆದುಕೊಂಡ ಮೇಲೆ ತಿಂಗಳು ಕೊನೆಯಲ್ಲಿ ಪಾಕೆಟ್ ಖಾಲಿಯಾಗಿ ಬಿಡುತ್ತದೆ. ಆದರೆ ಈ ವಾಕ್ಯದ ಪ್ರಕಾರ ನಿನ್ನ ಪಾಕೆಟ್ ಖಾಲಿ ಆಗುವ ಮೊದಲೇ ನಾನು ತುಂಬಿಸುತ್ತಲೇ ಇರುತ್ತೇನೆ. ಅದನ್ನು ಖಾಲಿ ಆಗಲು ಬಿಡುವುದಿಲ್ಲ. ಎಲೆ ಬಾಡಿ ಹೋಗುವುದಕ್ಕೆ ಬಿಡುವುದಿಲ್ಲ. ಅವರು ಕೊಡುವಾಗ ಅದು  ಆಶೀರ್ವಾದವಾಗಿರುತ್ತದೆ. "ಮರ" ಎಂಬ ನಿಮ್ಮಲ್ಲಿ ಎಲೆ ಬಾಡಿ ಹೋಗುವುದಿಲ್ಲ, ಎಲೆ ಔಷಧಿಯಾಗಿರುವುದು ಬೇರೆಯವರಿಗೋಸ್ಕರ.

 ನೀವು ಎಲ್ಲಿಯ ತನಕ ದೇವರ ಉದ್ದೇಶವನ್ನು ನೆರವೇರಿಸಬೇಕು ಎಂದು ಗಮನವಾಗಿದ್ದೀರೋ, ಅಲ್ಲಿಯತನಕ ನೀವು ಎಂಬ ಮರ ನಿಮ್ಮಲ್ಲಿರುವ ಎಲೆಗಳು ಇನ್ನೊಬ್ಬರಿಗೆ ಆಶೀರ್ವಾದವಾಗಿರುತ್ತವೆ. ಇನ್ನೊಬ್ಬರನ್ನು ಗುಣಪಡಿಸುತ್ತಲೇ ಇರುತ್ತವೆ. ನಮ್ಮ ಮೂಲಕ ಇನ್ನೊಬ್ಬರಿಗೆ ಬಿಡುಗಡೆಯಾಗುತ್ತಲೇ ಇರುತ್ತದೆ.

 ದೇವರ ಉದ್ದೇಶದ ಪ್ರಕಾರ ಇಲ್ಲದೆ, ದೇವರ ಉದ್ದೇಶವನ್ನು ನೆರವೇರಿಸುವುದಕ್ಕೆ ಪ್ರಾಮುಖ್ಯವನ್ನು ಕೊಡದೆ, ದೇವರ ಕಾರ್ಯ ನಿಮ್ಮಲ್ಲಿ ಪ್ರಕಟವಾಗಲು ನೆರವೇರಲಿಕ್ಕೆ ಸಾಧ್ಯವೇ ಇಲ್ಲ. 

 ಉದಾಹರಣೆ : ಅಕ್ವೇರಿಯಂ ನಲ್ಲಿ ಮೀನುಗಳನ್ನು ಇಟ್ಟಿದ್ದರೆ, ಅದಕ್ಕೆ ಕರೆಕ್ಟ್ ಆಗಿ ಆಕ್ಸಿಜನ್ ಹೋಗುತ್ತಾ ಇರಬೇಕು. ಆ ನೀರನ್ನು ಕ್ಲೀನ್ ಮಾಡುತ್ತಲೇ ಇರಬೇಕು. ಇಲ್ಲದಿದ್ದರೆ ಅದರಲ್ಲಿರುವ ಮೀನುಗಳು  ಸತ್ತು ಹೋಗುತ್ತವೆ. 

 ನದಿ ಹರಿಯುತ್ತಲೇ ಇರುವುದರಿಂದ, ಯಾವ ನಿರ್ವಹಣೆಯಾಗಲಿ, ಸ್ವಚ್ಛತೆಯಾಗಲಿ ಬೇಕಾಗಿಲ್ಲ, ಆಮ್ಲಜನಕವನ್ನು ಕೊಡಬೇಕಾಗಿಲ್ಲ. ಯಾಕೆಂದರೆ ಹರಿಯುವ ನೀರು ಯಾವಾಗಲೂ ತಾಜಾ  ಮತ್ತು ಸ್ವಚ್ಛವಾಗಿ  ಇರುತ್ತದೆ. 

 ಯೇಸುವಿನ ನಾಮದಲ್ಲಿ ಅದರಂತೆ ನಿಮ್ಮ ಜೀವನದಲ್ಲಿ ವಾಕ್ಯ ಎಂಬ ನದಿ ಹರಿಯುತ್ತಲೇ ಇರುವುದರಿಂದ, ನಿಮ್ಮಲ್ಲಿರುವ ಕಾರ್ಯಗಳು ಬೇರೆಯವರಿಗೆ ಆಶೀರ್ವಾದವಾಗಿ ಇರುವುದರಿಂದ , ನಿಮಗೆ ಯಾವ ನಿರ್ವಹಣೆಯಾಗಲಿ, ಯಾವ ಸ್ವಚ್ಛತೆಯಾಗಲಿ ಬೇಕಾಗಿಲ್ಲ. ನೀವು ಯಾವಾಗಲೂ ಆರೋಗ್ಯವಾಗಿ, ಜೀವವಾಗಿ ಮತ್ತು ಜಯವಾಗಿ ಇರುತ್ತೀರಿ ಎಂದು ಡಿಕ್ಲೇರ್ ಮಾಡುತ್ತಿದ್ದೇನೆ. 

 ನಿಮ್ಮ ಜೀವಿತದಲ್ಲಿ ಸಮಸ್ಯೆ ಪರಿಹಾರವಾಗುವುದಕ್ಕಾಗಿ ದೇವರನ್ನು ಹುಡುಕುವ ಅವಶ್ಯಕತೆ ಇಲ್ಲ, ನೀವು ದೇವರಲ್ಲಿ ಇದ್ದರೆ ಸಮಸ್ಯೆ ಇರುವುದಿಲ್ಲ, ನೀವು ದೇವರಲ್ಲಿ ಇದ್ದರೆ ಪರಿಪೂರ್ಣರಾಗಿರುವಿರಿ. ನೀವು ದೇವರಲ್ಲಿ ಇದ್ದರೆ ಆತನ  ಸ್ವಭಾವವೇ ಜೀವವಾಗಿರುವುದರಿಂದ, ಸತ್ತಿದ್ದರೆ ಎದ್ದೇಳಲೇಬೇಕು. ಇಲ್ಲಿ ನಮ್ಮ ಪ್ರಯತ್ನ ಏನು ಇಲ್ಲ.

 ಪ್ರವಾದನೆಯ ಘೋಷಣೆ :

ನೀವು ಮರುಭೂಮಿಯಲ್ಲಿ ಹೇಗೋ ಜೀವ ಉಂಟಾಗಿ ಬದುಕುವುದಲ್ಲ. ನೀವು ಸಾಧಾರಣವಾದ ಜೀವನವನ್ನು ಜೀವಿಸುವವರಲ್ಲ. ಅಭಿವೃದ್ಧಿ ಹೊಂದಿ ಪರಿಪೂರ್ಣವಾದ  ಜೀವನದಲ್ಲಿ ಇರುತ್ತೀರಿ. ಜೀವವನ್ನು ಹೊಂದಿಕೊಂಡು ಓಡಾಡುವ ವಾಹನವಾಗಿರುತ್ತೀರಿ. ನೀವು ಎಲ್ಲಿಗೆ ಹೋದರೂ, ಜೀವ ಹರಿಯುತ್ತದೆ. ಸಾವನ್ನು ನಾಶಪಡಿಸುವವರಾಗಿರುತ್ತೀರಿ. ನೀವು ಗುಣಪಡಿಸುವವರಾಗಿರುತ್ತೀರಿ. ನಿಮ್ಮ ಸಮೃದ್ಧಿ ಹೆಚ್ಚಳವಾಗುತ್ತಲೇ ಇರುತ್ತದೆ ಎಂದು ಯೇಸುವಿನ ನಾಮದಲ್ಲಿ ಡಿಕ್ಲೇರ್ ಮಾಡುತ್ತೇನೆ. 

 ಇದೇ ರೀತಿಯ ಘಟನೆಯನ್ನು ಇನ್ನೊಂದು ಕಡೆ ನೋಡೋಣ.

ಪ್ರಕಟನೆ 22:1-3

 ಆಮೇಲೆ ಅವನು ಸ್ಫಟಿಕದಂತೆ ಪ್ರಕಾಶಮಾನವಾಗಿದ್ದ ಜೀವಜಲದ ನದಿಯನ್ನು ನನಗೆ ತೋರಿಸಿದನು. ಅದು ದೇವರ ಮತ್ತು ಯಜ್ಞದ ಕುರಿಯಾದಾತನ ಸಿಂಹಾಸನದಿಂದ ಹೊರಟು ಪಟ್ಟಣದ ಬೀದಿಯ ಮಧ್ಯದಲ್ಲಿ ಹರಿಯುತ್ತಿತ್ತು. ಆ ನದಿಯ ಉಭಯ ಪಾರ್ಶ್ವಗಳಲ್ಲಿ ಜೀವವೃಕ್ಷವಿತ್ತು; ಅದು ತಿಂಗಳು ತಿಂಗಳಿಗೆ ಫಲವನ್ನು ಫಲಿಸುತ್ತಾ ಹನ್ನೆರಡು ತರದ ಫಲಗಳನ್ನು ಕೊಡುತ್ತದೆ. ಆ ಮರದ ಎಲೆಗಳು ಜನಾಂಗದವರನ್ನು ವಾಸಿಮಾಡುವದಕ್ಕೆ ಪ್ರಯೋಜನವಾಗಿವೆ. ಇನ್ನು ಶಾಪಗ್ರಸ್ತವಾದದ್ದು ಒಂದೂ ಇರುವದಿಲ್ಲ. ಆ ಪಟ್ಟಣದಲ್ಲಿ ದೇವರ ಮತ್ತು ಯಜ್ಞದ ಕುರಿಯಾದಾತನ ಸಿಂಹಾಸನವಿರುವದು.

 ಏದೆನ್ ನಲ್ಲಿ ಒಂದು ನದಿ ಉತ್ಪತ್ತಿಯಾಗಿ ಹೊರಟಿದ್ದೆ, ಇಡೀ ಭೂಮಿ ಜೀವವಾಗಿ, ಆರೋಗ್ಯವಾಗಿ ಇರಬೇಕು ಅಂದರೆ "ತೋಟ" ಎಂಬ ಮನುಷ್ಯನ ಮೂಲಕ ಹರಿಯಲೇಬೇಕು. 

ಏದೆನ್ ನಿಂದ ಹರಿಯುವ ನೀರು ಮಾತ್ರವೇ ಮನುಷ್ಯನಿಗೆ ಆಧಾರವಾಗಿರಬೇಕು. ದೇವರ ಸೃಷ್ಟಿಸಿದಾಗ ಸಾವಿರ ಲಕ್ಷ ಮರಗಳನ್ನು ಸೃಷ್ಟಿಸಿಲ್ಲ, ಒಂದೇ ಒಂದು ಬೀಜವನ್ನು ಸೃಷ್ಟಿಸಿದ್ದಾರೆ. ಅಂದರೆ ಏನನ್ನು ಸೃಷ್ಟಿಸಿದರೋ ಅದರಿಂದಲೇ ಎಲ್ಲ ದ್ವಿಗುಣವಾಗಬೇಕು.

 ಅದರಂತೆ ಏದೆನ್ ನಲ್ಲಿ "ನದಿ" ಎಂಬ ವಾಕ್ಯವೇ ಆತ್ಮವಾಗಿ ಹರಿದು ಬಂದು, "ತೋಟ" ಎಂಬ ಮನುಷ್ಯನು ಫಲಭರಿತವಾಗಿ ಅವನ ಮೂಲಕ ಕಾರ್ಯಗಳು ನೆರವೇರುವಂತೆ ಈ ಲೋಕವನ್ನು ಸೃಷ್ಟಿಸಿದರು. ಇದೇ ದೇವರ ಮೂಲ ವಿನ್ಯಾಸ. 

 ಆದರೆ ಈಗ ಪಾಪದ ನಿಮಿತ್ತವಾಗಿ ಮನುಷ್ಯ ಬಿದ್ದು ಹೋದ. ಅದಕ್ಕೆ ಯೆಹೆಜ್ಕೇಲ ಪ್ರವಾದಿಯ ಮೂಲಕ ದೇವರು ಅವನಿಗೆ ಒಂದು ಚಿತ್ರವನ್ನು ತೋರಿಸುತ್ತಿದ್ದಾರೆ. ದೇವರು ಶರೀರದಲ್ಲಿ ಬಂದು ಆ ಶರೀರದ ಮೂಲಕವೇ ಪ್ರಕಟಿಸುವ ಕಾರ್ಯ. 

 ಅದರ ಮಾದರಿಯಲ್ಲಿ ಒಂದು ಆಲಯವನ್ನು ಕಟ್ಟಿಸಿ, ಆಲಯದಿಂದ ಉತ್ಪತ್ತಿಯಾಗುವುದು ನಾನೇ. ನನ್ನ ಜೀವ, ನನ್ನ ನದಿ, ನನ್ನ ನೀರು ಎಂದು ಹೇಳಿ, ಹರಿದು, ಅದರ ಮೂಲಕ ನದಿಯ ಬಳಿಯಲ್ಲಿರುವ ಮರಗಳ ಎಲೆಗಳು ಬಾಡಿ ಹೋಗದೆ, ಹಣ್ಣುಗಳನ್ನು ಉತ್ಪತ್ತಿ ಮಾಡಿ ಯಾವ ರೀತಿ ಫಲರಿತವಾಗಿವೆ ಎಂದು ತೋರಿಸಿದರು. 

 ಈಗ ಪ್ರಕಟಣೆ 22:1 ರಲ್ಲಿ ದೇವರ ಮತ್ತು ಯಜ್ಞದ ಕುರಿಯಾದಾತನ ಸಿಂಹಾಸನದಿಂದ ಹೊರಟು ಬಂದಿತ್ತು. ದೇವರು ಇಟ್ಟಿದ್ದನ್ನು ಅನುಭವಿಸದೆ, ಪಾಪದ ನಿಮಿತ್ತವಾಗಿ ಮನುಷ್ಯ ಕುಸಿದು ಬಿದ್ದ.

 ಅದಕ್ಕೆ ಯೇಸು ಶರೀರದಲ್ಲಿ ಬಂದು ಈ ಭೂಮಿಯಲ್ಲಿ ನಾನೇ ಜೀವ ಜಲ, ನಾನೇ ಆಲಯ. ಇದನ್ನು ನಾಶಪಡಿಸಿದರೆ ಮತ್ತೆ ಮೂರು ದಿನದಲ್ಲಿ ಎಬ್ಬಿಸಿ, ಮತ್ತೆ ಹರಿದು, ಮತ್ತೆ ಆರೋಗ್ಯವನ್ನು ಲವನ್ನು ಕೊಡುವ ಕಾರ್ಯವನ್ನು ಯೆಹೆಜ್ಕೇಲ ಪ್ರವಾದಿಯ ಗ್ರಂಥ ದಲ್ಲಿ ತೋರಿಸಿದರು. 

 ಅಳತೆ ಮಾಡಲು ಆಗದಷ್ಟು ಪವಿತ್ರಾತ್ಮನಿಂದ ಯೇಸು ತುಂಬಿದ್ದರು. ಅಂದರೆ ಆಲಯದಿಂದ ಹರಿಯುತ್ತಿರುವ ಜೀವ ಜಲ, ಆ ನದಿ ಅವರಲ್ಲಿ ತುಂಬಿತ್ತು. ಆ ನದಿ ಒಳಗಡೆ ಇರುವುದರಿಂದ ಅವರು ಹೋಗುವ ಜಾಗದಲ್ಲೆಲ್ಲ ಜೀವ ಉಂಟಾಗುತ್ತಿತ್ತು. ಆದ್ದರಿಂದ ರೋಗದಲ್ಲಿರುವವರು ಸ್ವಸ್ತವಾಗುತ್ತಿದ್ದರು. ಸತ್ತವರು ಜೀವವಾಗಿ ಏಳುತ್ತಿದ್ದರು.

 ಅದೇ ಯೇಸು ಈಗ ನಮಗೋಸ್ಕರ ಮರಣ ಹೊಂದಿ ಪುನರುತ್ಥಾನದ ಮೂಲಕ, ದೇವರಲ್ಲಿ ಇರುವ ಆ ನದಿ ಯೇಸುಕ್ರಿಸ್ತನ ಮೂಲಕ ನಿಮ್ಮ ಮೂಲಕ ಮತ್ತು ನನ್ನ ಮೂಲಕ ಹೊರಡುವ ಕಾರ್ಯವನ್ನೇ ಪ್ರಕಟಣೆ  22 ರಲ್ಲಿ ಹೇಳುತ್ತಿದೆ. 

ಆದ್ದರಿಂದಲೇ ಯೋಹಾನ 7: 37 & 38 ರಲ್ಲಿ,"“ನನ್ನನ್ನು ನಂಬಿದವನ ಹೊಟ್ಟೆಯೊಳಗಿಂದ ಶಾಸ್ತ್ರದಲ್ಲಿ ಹೇಳಿರುವ ಪ್ರಕಾರ ಜೀವಕರವಾದ ನೀರಿನ ಹೊಳೆಗಳು ಹರಿಯುವವು ಎಂದು ಕೂಗಿ” ಹೇಳಿದನು. ಎಂದು ವಾಕ್ಯ ಹೇಳುತ್ತದೆ. 

 ಅರ್ಥ: ನಾನು ದೇವರ ವಾಕ್ಯದಲ್ಲಿ ಬೇರೂರಿ ಇರುವಾಗ, ಆ ವಾಕ್ಯದಿಂದಲೇ ಹುಟ್ಟಿ, ಈಗ ಹರಿಯುವ ಕಾರ್ಯವೇ ಪ್ರಕಟಣೆ 22 ರಲ್ಲಿ ವಿವರಿಸಿದ್ದು. ಪ್ರಕಟಣೆಯಲ್ಲಿ  ಪುನರುತ್ಥಾನದ ಶಕ್ತಿಯ ಮೂಲಕ ಆ ಯೇಸುವೇ ನನ್ನಲ್ಲಿ ಇದ್ದು, ಈಗ ನನ್ನ ಒಳಗಡೆಯಿಂದ ಹರಿಯುವುದು. ಹಾಗಾದರೆ ನಿಮ್ಮ ಬಾಯಿಂದ ಬರುವ ಮಾತು ಸಾಧಾರಣ ಮಾತಲ್ಲ, ಅದಕ್ಕೆ ನಿಮ್ಮ ಗುರುತು, ನಿಮ್ಮ ಆರಾಧನೆ, ನಿಮ್ಮ ಅಧಿಕಾರ ಎಲ್ಲವೂ ಯೇಸುಕ್ರಿಸ್ತನಲ್ಲಿದೆ.  

 ಪ್ರಕಟಣೆಯಲ್ಲಿ ನಿಜವಾಗಲೂ ಏನನ್ನು ಹೇಳುತ್ತಿದ್ದಾರೆ ಎಂದರೆ ನಾವು ಉನ್ನತದಲ್ಲಿ ಕೂತಿರುವುದೇ ಆಳ್ವಿಕೆ ಮಾಡುವುದಕ್ಕಾಗಿ. ನಾವು ಮತ್ತೆ ಮತ್ತೆ ಸಮಸ್ಯೆಯಲ್ಲಿ ಬಿದ್ದು, ಸಮಸ್ಯೆಯಿಂದ ಬಿಡುಗಡೆ ಆಗುವುದಕ್ಕೋಸ್ಕರ ಅಲ್ಲ, ಸಮಸ್ಯೆಯೇ ಬರದೆ ನಿತ್ಯ ನಿತ್ಯವಾದ ಸಮಾಧಾನ, ನಿತ್ಯ ನಿತ್ಯವಾದ ಆರೋಗ್ಯ, ನಿತ್ಯ ನಿತ್ಯವಾದ ಆಶೀರ್ವಾದ, ನಿತ್ಯ ನಿತ್ಯವಾದ ಐಶ್ವರ್ಯ, ನಿತ್ಯ ನಿತ್ಯವಾದ ಸಮೃದ್ಧಿ, ನಿತ್ಯ ನಿತ್ಯವಾದ ಜೀವದ ಹರಿವು, ನಿಮ್ಮಲ್ಲಿ ನಿತ್ಯ ನಿತ್ಯವಾದ ಸಮೃದ್ಧಿಯ ಹರಿವು, ನಿತ್ಯ ನಿತ್ಯವಾದ ಸ್ವಸ್ಥತೆಯ ಹರಿವು ಲಭರಿತರಾಗಿರುವ ಹರಿವು ಉಂಟಾಗಲಿ ಎಂದು ಯೇಸುವಿನ ನಾಮದಲ್ಲಿ ಡಿಕ್ಲೇರ್ ಮಾಡುತ್ತೇನೆ. 

 ಇನ್ನು ಮುಂದೆ ವಾಕ್ಯ ಒಂದು ಮೂಲೆಯಲ್ಲಿ ಇರುವುದಿಲ್ಲ. ವಾಕ್ಯವನ್ನು ಹೊತ್ತುಕೊಂಡು ಹರಿಯುವ ಆ ಪವಿತ್ರ ಆತ್ಮನು, ಆ ವಾಕ್ಯವನ್ನು ಯಾವ ಯಾವ ಏರಿಯಾದಲ್ಲಿ ಏನೇನು ಮಾಡಬೇಕು ಎಂದು ಆ ಕಡೆ ಹರಿಯುವಾಗ, ಆ ಏರಿಯಾದಲ್ಲಿ ನಿಮಗೆ ಜೀವ ಉಂಟಾಗುತ್ತಿದೆ, ಬಿಡುಗಡೆ ಉಂಟಾಗುತ್ತಿದೆ , ನಿಮ್ಮ ಜೀವಿತದಲ್ಲಿ ಇನ್ನೂ ಒಣಗಿರುವ ಪರಿಸ್ಥಿತಿಯಲ್ಲಿ ಇರುವುದಿಲ್ಲ, ಮರುಭೂಮಿಯಲ್ಲಿ ಜೀವಿಸುವವರು ಅಲ್ಲ, ನೀವು ಶ್ರಮಪಡುವುದಿಲ್ಲ, ಯೇಸುವಿನ ನಾಮದಲ್ಲಿ ನೀವು ಯೇಸು ಕ್ರಿಸ್ತನಲ್ಲಿ ಕೂತಿರುವುದರಿಂದ ನಿಮ್ಮ ಮೂಲಕ ಜೀವ ಜಲ ಹರಿಯುತ್ತಿದೆ. ನೀವು ಎಲ್ಲಿ ಹೋದರೂ ಅಲ್ಲಿ ಜೀವ ಉಂಟಾಗುತ್ತದೆ.

 ಇಸ್ರಾಯೇಲ್ ಜನರು ವಿಧೇಯರಾಗಿಲ್ಲ ಎಂದು ಎಲೀಯನು ಮಳೆಯನ್ನೇ ನಿಲ್ಲಿಸಿಬಿಟ್ಟನು. ನೀರೇ ಇಲ್ಲದ ಜಾಗದಲ್ಲಿ ಹುಲ್ಲು ಕೂಡ ಬೆಳೆಯುತ್ತಾ ಇಲ್ಲ ಅಂತ ಒಂದು ಪರಿಸ್ಥಿತಿಯಲ್ಲಿ ದೇವರು ಎಲೀಯನಿಗೆ ಹೇಳುತ್ತಾರೆ," ಕೆರೀತ್" ಎಂಬ ಸ್ಥಳಕ್ಕೆ ಹೋಗು, ಅಲ್ಲಿ ನಿನಗೆ ಆ ನದಿಯ ಬಳಿಯಲ್ಲಿರುವ ನೀರನ್ನು ಕುಡಿ ನಾನು ಒಂದು ಕಾಗೆಯನ್ನು ಕಳುಹಿಸುತ್ತೇನೆ.  ಅದು ನಿನಗೆ ಮಾಂಸವನ್ನು ರೊಟ್ಟಿಯನ್ನು ಕೊಡುವುದು. 

 ದೇಶದಲ್ಲಿಯೇ ಬರಗಾಲ, ಊಟ ಇಲ್ಲ, ನೀರಿಲ್ಲ ಅಂತ ಪರಿಸ್ಥಿತಿಯಲ್ಲಿ ಒಬ್ಬನಿಗೆ ಮಾತ್ರ ಎಲ್ಲಾ ರೀತಿಯ ಅವಶ್ಯಕತೆಗಳು ನೆರವೇರುತ್ತವೆ. ಯಾಕೆಂದರೆ ದೇವರು ಹೇಳಿದರು," ನೀರಿನ ಬಳಿಯಲ್ಲಿ ಹೋಗಿ ಕೂತುಕೋ" ಎಂದು. 

 ನೀರಿನ ಬಳಿಯಲ್ಲಿ ಕೂತುಕೊಂಡರೆ ನೀವು ಶ್ರಮ ಪಡುವುದಿಲ್ಲ, ನೀವು ಪ್ರಯತ್ನ ಪಡುವುದಿಲ್ಲ, ನೀವು ಕಷ್ಟಪಡುವುದಿಲ್ಲ, ತಲೆ ಕೆಡಿಸಿಕೊಳ್ಳುವುದಿಲ್ಲ, ಇಡೀ ದೇಶವೇ ಊಟವಿಲ್ಲದೆ ಇರುವಾಗಲೂ, ಇವನೊಬ್ಬನಿಗೆ ಕಾಗೆ ಬಂದು ಊಟ ಕೊಡುತ್ತಿದೆ. ಕಾಗೆಯ ಸ್ವಭಾವ ಹೊಟ್ಟೆ ತುಂಬಿದ್ದರೂ ಕೂಡ ಇನ್ನೊಬ್ಬರಿಗೆ ಬಿಟ್ಟು ಕೊಡುವುದಿಲ್ಲ, ಬಾಚಿಕೊಂಡು ಹೋಗುತ್ತದೆ. ಇಂಥ ಕಾಗೆ ಎಲೀಯನಿಗೆ ಊಟವನ್ನು ಕೊಡುತ್ತದೆ.

 ಅಂದರೆ ಜೀವ ಎಲ್ಲಿ ಹರಿಯುತ್ತೋ ಅಲ್ಲಿ ಶತ್ರು ಕೂಡ ನಿಮಗೆ ತೆಗೆದುಕೊಂಡು ಬಂದು ಕೊಡಬೇಕು. ಶತ್ರು ಏನೇ ಕಾರ್ಯಗಳನ್ನು ನಿಮಗೆ ವಿರುದ್ಧವಾಗಿ ಪ್ಲಾನ್ ಮಾಡಿದ್ದರೂ, ಅವುಗಳೂ ಕೂಡ ನಿಮಗೆ ಅನುಕೂಲವಾಗಿ, ನಿಮಗೆ ಆಶೀರ್ವಾದವಾಗಿ, ನಿಮಗೆ ಜಯವಾಗುವಂತೆ ಇರುತ್ತವೆ. ಯಾಕೆಂದರೆ ನೀವು ನೀರಿನ ಬಳಿಯಲ್ಲಿ ಬೇರೂರಿ ಇರುವುದರಿಂದ.

" ನೀರಿನ ಬಳಿ'" ಎಂದು ಹೇಳುವಾಗ ವಾಕ್ಯದಲ್ಲಿ ನೀವು ಬೇರೂರಿ ಇರುವುದರಿಂದ ನಿಮಗೆ ಎಲ್ಲಾ ಕಾರ್ಯಗಳು ಅನುಕೂಲವಾಗಿರುವುದು ಎಂದು ಯೇಸುವಿನ ನಾಮದಲ್ಲಿ ಡಿಕ್ಲೇರ್ ಮಾಡುತ್ತೇನೆ 

 ಒಂದನೇ ಅರಸು 17ನೇ ಅಧ್ಯಾಯದಲ್ಲಿ ನೋಡುವಾಗ ಒಂದು ದಿನ ಆ ನೀರು ಒಣಗಿ ಹೋಯಿತು. 

 ಯಾವಾಗ ಒಂದು ಕಾರ್ಯ ನಿಂತು ಹೋಗುತ್ತದೆಯೋ, ಆಗ ದೇವರು ಕೈ ಬಿಟ್ಟುಬಿಟ್ಟ ಅಂತ ಅರ್ಥ ಅಲ್ಲ, ಇದಕ್ಕಿಂತ ವಿಶೇಷವಾದ ಒಂದು ಕಾರ್ಯವನ್ನು ಇಟ್ಟಿದ್ದಾರೆ ಎಂದು ಅರ್ಥ. 

 ಯೇಸುವಿನ ನಾಮದಲ್ಲಿ ಈಗ 2026ರಲ್ಲಿ ನಿಮಗೆ ಸಮಸ್ಯೆ ಬಂದು ಸಮಸ್ಯೆಯನ್ನು ಪರಿಹಾರ ಮಾಡಲು ಬಲ ಬೇಕಾಗಿಲ್ಲ, :" ಸಮಸ್ಯೆ ಇಲ್ಲದೆ ಆಳ್ವಿಕೆ ಮಾಡಲು ನಿಮ್ಮನ್ನು ಭೂಮಿಯಲ್ಲಿ ಇಟ್ಟಿದ್ದಾರೆ" ಎಂಬ ಆ ತಿಳುವಳಿಕೆ ಆ ಪ್ರಕಟಣೆ ಬಂದಿರುವುದರಿಂದ, ಇನ್ನು ಶತ್ರು ನಿಮ್ಮನ್ನು ಯಾಮಾರಿಸಲು ಸಾಧ್ಯವಿಲ್ಲ, ನಿಮಗೆ ಕಾಯಿಲೆಗಳನ್ನು ತರಲು ಸಾಧ್ಯವಿಲ್ಲ, ನಿಮಗೆ ನಷ್ಟವನ್ನು ತರಲು ಸಾಧ್ಯವಿಲ್ಲ.

ನೀವು ಎಲ್ಲೆಲ್ಲಿ ಹೊರಡುತ್ತಿರೋ ಅಲ್ಲಲ್ಲಿ ಜೀವ ಉಂಟಾಗುತ್ತದೆ. ನೀವು ಹೊಂದಿಕೊಂಡಿರುವ ಅಭಿಷೇಕ 2026ರಲ್ಲಿ ನೀವು ಐಶ್ವರ್ಯವನ್ನು ಹುಡುಕಿಕೊಂಡು ಹೋಗುವುದಿಲ್ಲ, ಐಶ್ವರ್ಯವೇ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ನಿಮ್ಮನ್ನು ಅಟ್ಟಿಸಿಕೊಂಡು ಬರುತ್ತದೆ. ಯಾಕೆಂದರೆ ನೀವು ನೀರಿನ ಬಳಿಯಲ್ಲಿ ಇರುವುದರಿಂದ ಜೀವ ಎಲ್ಲಿದೆಯೋ ಅಲ್ಲಿ ಸಮೃದ್ಧಿ ಇರಲೇಬೇಕು.  

ವಾಕ್ಯವನ್ನು ಹೊತ್ತುಕೊಂಡು ಓಡಾಡುವ ವಾಹನ ವಾಗಿರುವುದರಿಂದ, ನೀವು ಎಲ್ಲೆಲ್ಲಿ ಹೋಗುತ್ತೀರೋ ಅಲ್ಲಲ್ಲಿ ಪವಿತ್ರಾತ್ಮನು ನಿಮ್ಮಲ್ಲಿರುವ ವಾಕ್ಯವನ್ನು ಮಾಂಸವಾಗಿ ಮಾರ್ಪಡಿಸಿ ದೇವರ ನಾಮವನ್ನು ಮಹಿಮೆ ಪಡಿಸುತ್ತಾನೆ ಎಂದು ಯೇಸುವಿನ ನಾಮದಲ್ಲಿ ಡಿಕ್ಲೇರ್ ಮಾಡುತ್ತೇನೆ.

 ಈಗ ಕೂಡ ಹೊಸ ವರ್ಷದಲ್ಲಿ ನಿಮಗೆ ಬೇಕಾಗಿರುವ, ನಿಮಗೆ ಅಗತ್ಯವಾಗಿರುವ ಕಾರ್ಯವನ್ನು ನೀವು ಹುಡುಕಿಕೊಂಡು ಹೋಗುವುದಿಲ್ಲ. ಇವತ್ತು ನೀವು ಹೊಂದಿಕೊಂಡಿರುವ ವಾಕ್ಯವೆಂಬ ನದಿಯ ಬಳಿಯಲ್ಲಿ ನೀವು ಬೇರೂರಿ ಇರುವುದರಿಂದ, ಹೆಚ್ಚಳ ನಿಮ್ಮನ್ನು ಅಟ್ಟಿಸಿಕೊಂಡು ಬರುತ್ತದೆ.

 ಸಮೃದ್ಧಿ ನಿಮ್ಮನ್ನು ಅಟ್ಟಿಸಿಕೊಂಡು ಬರುತ್ತದೆ.

 ಆರೋಗ್ಯ ನಿಮ್ಮಅಟ್ಟಿಸಿಕೊಂಡು ಬರುತ್ತದೆ.

 ಐಶ್ವರ್ಯ ನಿಮ್ಮನ್ನು ಅಟ್ಟಿಸಿಕೊಂಡು ಬರುತ್ತದೆ.

 ಪರಿಪೂರ್ಣತೆ ನಿಮ್ಮನ್ನು ಅಟ್ಟಿಸಿಕೊಂಡು ಬರುತ್ತದೆ.

 ಜಯ ನಿಮ್ಮನ್ನು ಅಟ್ಟಿಸಿಕೊಂಡು ಬರುತ್ತದೆ.  

 ಸರಿಯಾದ ಸ್ಥಳದಲ್ಲಿ, ಸರಿಯಾದ ವ್ಯಕ್ತಿಯ ಮೂಲಕ, ಸರಿಯಾದ ಸಮಯದಲ್ಲಿ, ಸರಿಯಾದ ಕಾರ್ಯಗಳು ನಡೆಯುತ್ತಲೇ ಇರುತ್ತವೆ. ಯಾಕೆಂದರೆ ನೀವು ನದಿಯ ಬಳಿಯಲ್ಲಿ ನೆಡಲ್ಪಟ್ಟವರು.

 ಎಂದು ಯೇಸುವಿನ ನಾಮದಲ್ಲಿ ಡಿಕ್ಲೇರ್ ಮಾಡುತ್ತೇನೆ.

2026 ಅರಿಕೆ:

ನಿಮ್ಮ ಜೀವನದ ಮೇಲೆ ಶಾಪವು ಮುರಿದುಹೋಗಿದೆ.

ನೀವು ದೈವಿಕ ಜೀವನದ ವಾಹಕರು. ನೀವು ಕ್ರಿಸ್ತನಲ್ಲಿ ಕುಳಿತಿದ್ದೀರಿ. ದೇವರು ಮತ್ತು ಕುರಿಮರಿಯ ಸಿಂಹಾಸನವು ನಿಮ್ಮಲ್ಲಿ ಆಳುತ್ತದೆ.

ನದಿ ನಿಮ್ಮ ಮೂಲಕ ಹರಿಯುತ್ತದೆ. ನೀವು ಎಲ್ಲಿಗೆ ಹೋದರೂ ಜೀವ ಹರಿಯುತ್ತದೆ.

ಸಾವು ನಾಶವಾಗುತ್ತದೆ, ಗುಣಪಡಿಸುವುದು ಪ್ರಕಟವಾಗುತ್ತದೆ, ಸಮೃದ್ಧಿ ಹೆಚ್ಚಳವಾಗುತ್ತದೆ.

ನೀವು ಒಣಗುವುದಿಲ್ಲ. ನೀವು ಶ್ರಮಿಸುವುದಿಲ್ಲ. ನೀವು ಒತ್ತಡದಲ್ಲಿ ಕೆಲಸ ಮಾಡುವುದಿಲ್ಲ. 

ವಿಶ್ರಾಂತಿಯಿಂದ ಸೇವೆ ಸಲ್ಲಿಸುತ್ತೀರಿ.ಕೃಪೆಯು ನಿಮ್ಮ ಫಲವನ್ನು ಹೆಚ್ಚಿಸುತ್ತದೆ.

ಯೇಸುವಿನ ನಾಮದಲ್ಲಿ. ಆಮೆನ್.


2026 Prophecy!

The curse on your life is broken.

You are the carriers of divine life. You are seated in Christ. The throne of God and the Lamb reigns in you.

The river flows through you. Wherever you go, life flows.

Death is destroyed, Healing manifests, Prosperity increases.

You will not wither. You will not strive. You will not work under pressure.

You will serve in rest. Grace will increase your fruit. In Jesus Name. Amen.


ಫಾಲೋ ಮಾಡಿ, ಲೈಕ್ ಮಾಡಿ, ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ!




  
           
SCAN FOR THE LOCATION 

For Prayer Request WhatsApp: 9880516003

GOOGLE MEET LINK - TO JOIN MORNING PRAYER @6 AM from MONDAY TO FRIDAY


 

Comments

  1. Amen Amen glory to god 💯💯💯 i received it in my spirit in mighty name of Jesus 🔥🔥

    ReplyDelete
  2. Praise the Lord for this wonderful revelation 🙏

    ReplyDelete
  3. GLORY GLORY GLORY to god wonderful summarized all GLORY to be LORD JESUS CHRIST alone AMEN I AGREE and received it in my spirit in the mighty Jesus Christ name Amen 🙏

    ReplyDelete
  4. I received it in my spirit in the mighty name of Jesus name Amen 🔥 🔥 🔥

    ReplyDelete

Post a Comment

Popular posts from this blog

Testimony #701 - ಆ ಸಮಯದಲ್ಲಿ ನನಗೆ ಆರೋಗ್ಯ ತುಂಬಾ ಹದಗೆಟ್ಟಿತ್ತು

2025 ಅಕ್ಟೋಬರ್ ತಿಂಗಳಿಗೆ ದೇವರು ಕೊಟ್ಟ ಪ್ರವಾದನೆಯ ವಾಗ್ದಾನವು "ಇಲ್ಲದ್ದನ್ನು ಕರೆಯುವುದು" (Month of Calling Things that do not exist )

2025 ನೇ ವರ್ಷ ಸೆಪ್ಟೆಂಬರ್ ತಿಂಗಳಿಗೆ ದೇವರು ಕೊಟ್ಟ ಪ್ರವಾದನೆಯ ವಾಗ್ದಾನವು "Deliver" (ಕೊಡಲ್ಪಡುವುದು)