2025 ಅಕ್ಟೋಬರ್ ತಿಂಗಳಿಗೆ ದೇವರು ಕೊಟ್ಟ ಪ್ರವಾದನೆಯ ವಾಗ್ದಾನವು "ಇಲ್ಲದ್ದನ್ನು ಕರೆಯುವುದು" (Month of Calling Things that do not exist )


 ಯೇಸುವಿನ ನಾಮದಲ್ಲಿ ಓದುವ ಪ್ರತಿಯೊಬ್ಬ ಸಹೋದರ  ಮತ್ತು ಸಹೋದರಿಯರ  ಆತ್ಮದ ಕಣ್ಣುಗಳು ತೆರೆಯಲ್ಪಟ್ಟು ನೀವು ಸದಾಕಾಲವೂ ದೇವರ ಆಶೀರ್ವಾದದಲ್ಲಿ ತುಂಬಿ, ತುಳುಕಿ ಮತ್ತು ಹರಿಯುವ ರೀತಿಯಲ್ಲಿ ನಿಮ್ಮ ಜೀವನ ದೇವರ ಉದ್ದೇಶದ ಪ್ರಕಾರ ನಡೆಯಲಿ ಎಂದು ಯೇಸುವಿನ ಹೆಸರಿನಲ್ಲಿ ಅರಿಕೆ ಮಾಡುತ್ತಿದ್ದೇನೆ! 

 ದೇವರು ಆ ತಿಂಗಳಲ್ಲಿ ಕೊಡುವ ವಾಗ್ದಾನವನ್ನು ಆ ತಿಂಗಳಿನಲ್ಲಿಯೇ ನೆರವೇರಿಸುವವನಾಗಿದ್ದಾನೆ ಮತ್ತು ನಮ್ಮ ಜೀವನದಲ್ಲಿ ಅದೇ ರೀತಿಯಾಗಿ ಮಾಡುತ್ತಾ ಬರುತ್ತಿದ್ದಾನೆ.

 ಕಳೆದ 9 ತಿಂಗಳು ಒಂದೊಂದು ತಿಂಗಳಿಗೆ ಒಂದೊಂದು ವಾಗ್ದಾನವನ್ನು ಕೊಟ್ಟು ಆಶೀರ್ವದಿಸಿದ್ದಾನೆ. ವಿಶೇಷವಾಗಿ  ಸೆಪ್ಟೆಂಬರ್ ತಿಂಗಳಲ್ಲಿ ನೀವು ಊಹಿಸುವುದಕ್ಕಿಂತಲೂ ಮತ್ತು ಯೋಚಿಸುವುದಕ್ಕಿಂತಲೂ ಹೆಚ್ಚಾದ ಪಾರ್ಸಲ್ ಗಳು deliver ಆಗಿ, ನೀವು ಎದುರು ನೋಡುವುದಕ್ಕಿಂತಲೂ, ಎದುರು ನೋಡದೆ ಇರುವ ಪಾರ್ಸಲ್ ಗಳು ಬಂದು ಅನೇಕರನ್ನು ಸಾಕ್ಷಿಯಾಗಿ ದೇವರು  ಎಬ್ಬಿಸಿರುವುದಕ್ಕಾಗಿ ದೇವರಿಗೆ ಸ್ತೋತ್ರ.

 ಅದೇ ರೀತಿಯಾಗಿ ಈ ತಿಂಗಳು ಇಲ್ಲದ್ದನ್ನು ಕರೆಯುವುದು {The Month of Calling Things that do not Exist!}

 ವಾಕ್ಯದ ಭಾಗ : 

ರೋಮಾ 4:17 - ನಾನು ನಿನ್ನನ್ನು ಅನೇಕ ಜನಾಂಗಗಳಿಗೆ ಮೂಲಪಿತೃವಾಗಿ ನೇವಿುಸಿದ್ದೇನೆಂದು ಶಾಸ್ತ್ರದಲ್ಲಿ ಬರೆದಿರುವ ಪ್ರಕಾರ ಅಬ್ರಹಾಮನು ನಮ್ಮೆಲ್ಲರಿಗೂ ದೇವರ ಸನ್ನಿಧಿಯಲ್ಲಿ ಮೂಲ ಪಿತೃವಾಗಿದ್ದಾನೆ. ದೇವರು ಸತ್ತವರನ್ನು ಬದುಕಿಸುವವನಾಗಿಯೂ ಇಲ್ಲದ್ದನ್ನು ಇರುವದಾಗಿ ಕರೆಯುವವನಾಗಿಯೂ ಇದ್ದಾನೆಂದು ಅಬ್ರಹಾಮನು ನಂಬಿದನು.

 ಇಲ್ಲದ್ದನ್ನು ಕರೆಯುವುದು:

 ಇಬ್ರಿಯ ಭಾಷೆಯಲ್ಲಿ "ಕರೆ ಹಾಗೂ ಉಂಟಾಗುವುದು"  ( call into Existence). ಅದು ಇರುವ ಹಾಗೆ ಕರೆ. ಕರೆಯುವುದು ಎಂಬ ಪದದ ಅರ್ಥ "Quara" ಕರ ಎಂದರೆ ಕರೆಯುವುದು, ಅರಿಕೆ ಮಾಡುವುದು, ನೇಮಿಸುವುದು ಮತ್ತು ಇದು ಹಾಗೆಯೇ ಆಗುವುದು ಎಂಬುದಾಗಿ  ಕಟ್ಟಳೆಯಾಗಿ ಹೇಳುವ  ವಿಷಯ. 

 ಉದಾಹರಣೆ:  ಆದಿಕಾಂಡ ಪುಸ್ತಕದಲ್ಲಿ ಸುಮಾರು ಹತ್ತಕ್ಕಿಂತ ಹೆಚ್ಚು ಬಾರಿ "ದೇವರು ಅಂದನು, ದೇವರು ಅಂದನು" ಎಂಬುದಾಗಿ ಹೇಳಿ ಒಂದು ಹೆಸರನ್ನು ಕರೆಯುತ್ತಾರೆ. 

 ಉದಾಹರಣೆಯ ವಾಕ್ಯ: 

ಆದಿ 1.5  - "ದೇವರು ಬೆಳಕನ್ನೂ ಕತ್ತಲನ್ನೂ ಬೇರ್ಪಡಿಸಿ ಬೆಳಕಿಗೆ  “ಹಗಲು” ಎಂದೂ, ಕತ್ತಲೆಗೆ “ಇರುಳು” ಎಂದೂ ಹೆಸರಿಟ್ಟನು. ಹೀಗೆ ಸಾಯಂಕಾಲವೂ ಉದಯಕಾಲವೂ ಆಗಿ ಮೊದಲನೆಯ ದಿನವಾಯಿತು".

 ದೇವರು ಬೆಳಕನ್ನು ಹಗಲು ಎಂದು ಕರೆದರು. ಕರೆದರು, ಕರೆಯುವುದು ಎಂದು ಹೇಳುವುದು, ಯಾವುದನ್ನು ಕರೆಯುತ್ತಾರೋ ಅದು ಹಾಗೆಯೇ ಅಲ್ಲಿ ಇರಬೇಕು. ಅದನ್ನು ಕರೆಯಬೇಕಾದರೆ ಅದನ್ನು ಮಾತನಾಡಬೇಕು. ಮಾತನಾಡುವುದು ಎಂದರೆ "ಕರೆ" (Quara)

ಇಬ್ರಿಯ ಪದಗಳ ಅರ್ಥಗಳು:

Qara: to call (ಕರೆ: ಕರೆಯುವುದು)

Amar: speak or give a sound (ಅಮರ್ : ಮಾತನಾಡುವುದು ಅಥವಾ ಶಬ್ದ ಕೊಡುವುದು)

Haya: to be (ಹಯಾ : ಹಾಗೆ ಇರಲಿ)


 ಕರ ಮತ್ತು ಹಯಾ ಎರಡನ್ನು ಸೇರಿಸಿದರೆ ಅದರ ಅರ್ಥ - ಕರ(Qara) - ಹಯ(Haya): ಕರೆದರೆ ಅದು ಇರಲೇಬೇಕು.

 ಈ ಪದದಿಂದಲೇ  ದೇವರು ಈ ತಿಂಗಳು ನಿಮಗೆ ಇಲ್ಲದೆ ಇರುವುದನ್ನು ಇರುವ ಹಾಗೆ ಕರೆಯುವ ಒಂದು ಅಭಿಷೇಕ, ದೇವರ ಆತ್ಮ, ದೇವರ ಜೀವ, ಇವತ್ತು ನಿಮ್ಮ ಮೇಲೆ ಬಿಡುಗಡೆ ಮಾಡುತ್ತಿದ್ದೇನೆ. ಎಲ್ಲ ಪ್ರವಾದನೆಯನ್ನು ಬಿಡುಗಡೆ ಮಾಡಬೇಕಾದರೆ ಕುತೂಹಲದಿಂದ ಉತ್ಸಾಹದಿಂದ ಅದನ್ನು ಸ್ವೀಕರಿಸಿರಿ.

 ನಾನು ನಿಮಗೆ ಹೇಳುತ್ತಿದ್ದೇನೆ, ನೀವು ಹೇಳಿದರೆ ನೀವು ಕರೆದರೆ ಅದು ಉಂಟಾಗಲೇಬೇಕು, ಆದರೆ ಏನು ಕರೆಯುತ್ತಿದ್ದೀರಿ ಎಂದು ನಾನು ಈಗ ನಿಮಗೆ ವಿವರಿಸುತ್ತೇನೆ, ಗಮನದಿಂದಿರಿ!

ದೇವ ಮನುಷ್ಯನ ಬಾಯಿಯಿಂದ ಬರುವ ವಾಕ್ಯವನ್ನು ಆತ್ಮವಾಗಿಯೂ ಜೀವವಾಗಿಯೂ, ಮತ್ತು ಅಭಿಷೇಕ ಮಾಡಲ್ಪಟ್ಟು ಬರುತ್ತಿದೆ ಎನ್ನುವ ಭಾವನೆಯಿಂದ  ಹೊಂದುಕೊಳ್ಳುತ್ತಿದ್ದೇನೆ  ಎಂಬ ತಿಳುವಳಿಕೆ ಪ್ರಜ್ಞೆಯಿಂದ ಹೊಂದಿಕೊಳ್ಳುವಾಗ  ಅದರ ಫಲ ಉನ್ನತದಲ್ಲಿರುತ್ತದೆ.

 ಯೇಸುವಿನ ನಾಮದಲ್ಲಿ ಈಗ ಪ್ರವಾದನೆಯಾಗಿ ನಾನು ನಿಮ್ಮ ಮೇಲೆ ಅರಿಕೆ ಮಾಡುತ್ತೇನೆ, ಇವತ್ತು ಈ ವಾಕ್ಯವನ್ನು ಓದುವ ಪ್ರತಿಯೊಬ್ಬರೂ ಸಾಧಾರಣವಾಗಿರುವುದಿಲ್ಲ. ಯಾಕೆಂದರೆ ವಾಕ್ಯದ ಆತ್ಮ, ಸತ್ಯದ ಆತ್ಮ ನಿಮ್ಮಲ್ಲಿ ಬಲವಾಗಿ ಕ್ರಿಯೆ ಮಾಡುತ್ತದೆ.

 ಮುಖ್ಯವಾಗಿ ದೇವರು ಮಾತನಾಡಿದ ಮಾತು ಬರಿ ಶಬ್ದವಲ್ಲ. ಅವರು ಮಾತನಾಡಿದ ಮಾತು ಆತ್ಮವಾಗಿಯೂ ಜೀವ ವಾಗಿಯೂ ಇತ್ತು. ಅಂದರೆ , ಆ ಮಾತಿನಲ್ಲಿ ಸೃಷ್ಟಿಸುವ ಸಾಮರ್ಥ್ಯವಿದೆ. ಕಾರ್ಯವನ್ನು ನೆರವೇರಿಸುವ ಬಲವಿದೆ.  ಇಲ್ಲದೇ ಇರುವುದನ್ನು ಇರುವ ಹಾಗೆ, ನಮ್ಮ ಶರೀರದ ಕಣ್ಣುಗಳು ನೋಡುವಂತೆ ಸೃಷ್ಟಿ ಮಾಡುವ  ಸಾಮರ್ಥ್ಯ, ಬಲ ಮತ್ತು ಶಕ್ತಿ ಇತ್ತು. ಹಾಗಾದರೆ ದೇವರು ಮಾತನಾಡಿದ ಮಾತು ಅದು ವ್ಯರ್ಥವಾದ ಮಾತಲ್ಲ.

 ಇವತ್ತು ಮನುಷ್ಯನು ಮಾತನಾಡುವುದಕ್ಕೂ ದೇವರು ಮಾತನಾಡುವುದಕ್ಕೂ ಒಂದು ದೊಡ್ಡ ವ್ಯತ್ಯಾಸವಿದೆ.

 ಯೇಸು ವಾಕ್ಯವಾಗಿದ್ದವರು ಶರೀರವಾದರು. ಅದರ ಅರ್ಥವೇನೆಂದರೆ ದೇವರ ಜೀವವುಳ್ಳ ವಾಕ್ಯವಾಗಿದ್ದವರು, ದೇವರ ವಾಗ್ದಾನವಾಗಿದ್ದವರು ಕಾಣುವ ರೂಪದಲ್ಲಿ ಸೃಷ್ಠಿಯಾಗಿದ್ದಾರೆ.

 ಈಗ ನಾವು ಕಾಣುವ ರೂಪದಲ್ಲಿ ಉಂಟು ಮಾಡುವುದಕ್ಕೆ ನಮಗಿರುವ ಆಧಾರವೇನೆಂದರೆ ಜೀವವುಳ್ಳ ವಾಕ್ಯ, ಆ ಜೀವವಾಕ್ಯವೇ ಯೇಸು. ಅವರ ಮೂಲಕವೇ ಸಮಸ್ತವೂ ಉಂಟಾಯಿತು.

ಅವರ ಮೂಲಕ, ಅವರಲ್ಲಿ ಮತ್ತು ಅವರಿಗೋಸ್ಕರ... ಎಲ್ಲವೂ ಸೃಷ್ಠಿ ಮಾಡಲ್ಪಟ್ಟಿದೆ. ಹಾಗಾದರೆ ದೇವರು ಒಂದು ಮಾತನ್ನು ಕಳಿಸಿದರೆ ಆ ಮಾತು ನಿಜಾಂಶವನ್ನು ಉಂಟು ಮಾಡುವ ಕಾರ್ಯ.  ಅವರು ಸುಮ್ಮನೆ ಒಂದು ಕಾರ್ಯಕ್ಕೆ ಹೆಸರು ಕೊಡುತ್ತಿಲ್ಲ, ಅವರು ಇಲ್ಲದೇ ಇರುವುದನ್ನು ಉಂಟಾಗುವ ರೀತಿಯಲ್ಲಿ ಅವರ ಮಾತು ಇದೆ ಎಂದು  ಅರ್ಥ. 


 ತತ್ವಗಳು (Principles):

 ದೇವರು ಆದಿಕಾಂಡದಲ್ಲಿ ಕರೆಯುವ ತನಕ ಯಾವುದು ಉಂಟಾಗಿರಲಿಲ್ಲ. ಹಾಗಾದರೆ ನೀವು ಕರೆಯುವುದೇ ಮುಂದೆ ನೀವು ಕರೆದ ಮೇಲೆ ಹಾಗೆಯೇ ಇರಬೇಕೆಂದೇ ಕರೆಯುತ್ತಾ ಇದ್ದೀರಿ.   

ಅದು ಶರೀರದ  ಕಣ್ಣುಗಳು ನೋಡುವ ಹಾಗೆ, ಶರೀರ ಅನುಭವಿಸುವ ಹಾಗೆ ಅದು ಉಂಟಾಗುವುದು ಅಥವಾ ಸೃಷ್ಠಿಸಲ್ಪಡುವುದು.

 ನೀವು ಕರೆಯಿರಿ ಅದು ಉಂಟಾಗುವುದು. ಈಗ ನನ್ನ ಪ್ರಶ್ನೆ, ಹಾಗಾದರೆ ನೀವು ಏನನ್ನು ಬೇಕಾದರೂ ಕರೆಯಬಹುದಾ? 

ಮನುಷ್ಯನು ಕರೆಯುವುದಕ್ಕೂ ಮತ್ತು ದೇವರು ಕರೆಯುವುದಕ್ಕೂ ಇರುವ ವ್ಯತ್ಯಾಸ:

 ದೇವರು ಕರೆದಾಗ ಇಲ್ಲದೇ ಇರುವುದನ್ನು ಅಂದರೆ ಸೃಷ್ಠಿ ಆಗದೇ ಇರುವುದನ್ನು ಕರೆದನು. ಹಾಗಾದರೆ ಆಕಾಶವನ್ನು, ಭೂಮಿಯನ್ನು, ಮರ, ಬೆಟ್ಟ, ಸಮುದ್ರ ಮತ್ತು ನದಿ ಇವುಗಳನ್ನೆಲ್ಲ ಕರೆದರು ಎಂದು ಹೇಳಿದರೆ ಅದು ಇರಲೇ ಇಲ್ಲ. ಇಲ್ಲದೇ ಇರುವುದನ್ನು ಅವರು ಕರೆದರು, ಕರೆದಂತೆಯೇ ಅದು ಸೃಷ್ಠಿಯಾಯಿತು. ಅವರು ಕರೆದರು, ಕರೆದ ಹಾಗೆಯೇ ಆ ಕಾರ್ಯಗಳು ಸೃಷ್ಠಿಸಲ್ಪಟ್ಟವು.

 ನಮ್ಮನ್ನು ದೇವರು ಅವರ ಸ್ವರೂಪದಲ್ಲಿ ಅವರ ಹೋಲಿಕೆಯಲ್ಲಿ  ಸೃಷ್ಠಿಸಿದ್ದಾರೆ. ಈಗ ನಾವು ಸಹ ಅವರ ಹಾಗೆಯೇ ಕಾರ್ಯಗಳನ್ನು ಮಾಡಬೇಕು ಎಂದು ನಮ್ಮನ್ನು ಸೃಷ್ಠಿ ಮಾಡಿದರು. ಆದರೆ ನಾವು ಕರೆಯುವಾಗ ಆ ಕಾರ್ಯಗಳು ಉಂಟಾಗಬೇಕು ಎಂದು ಹೇಳಿದರೆ, ನಾವು ಕರೆಯುವುದಕ್ಕೂ ದೇವರು ಕರೆಯುವುದಕ್ಕೂ ವ್ಯತ್ಯಾಸವಿದೆ.

 ಉದಾಹರಣೆ:

ತಂದೆಯಾದ ದೇವರು ಕರೆದಾಗ ಏನೇನು ಇರಲಿಲ್ಲ. ಆದರೆ ಆತನು ಕರೆದನು ಆ ಕಾರ್ಯಗಳು ಸೃಷ್ಠಿಯಾಗಲ್ಪಟ್ಟವು. 

ವಾಕ್ಯವಾಗಿದ್ದ ಯೇಸು ಭೂಲೋಕಕ್ಕೆ ಬಂದು 33 ವರ್ಷ ಈ ಭೂಲೋಕದಲ್ಲಿ ಇದ್ದು, ಸಾಧಾರಣ ಮನುಷ್ಯನ  ಜೀವನ ಹೇಗೆಲ್ಲಾ ಇರುತ್ತದೆಯೋ ಹಾಗೆಯೇ ಇದ್ದು, ದೇವರ ಮಹಿಮೆಯನ್ನು ಪ್ರಕಟಿಸಿ, ಮನುಷ್ಯನು ದೇವರಿಂದ ತುಂಬಿರುವಾಗ ಯಾವ ರೀತಿ ಜೀವಿಸಬಹುದು  ಎಂದು ತೋರಿಸಿ ಕೊಟ್ಟು ಹೋದರು.

 ಅಲ್ಲಿ ಯೇಸು ಕೂಡ ದೇವರು ಯಾವ ರೀತಿ ಕಾರ್ಯ ಮಾಡಿದ್ದಾರೋ ಅದೇ ರೀತಿಯ ಕಾರ್ಯಗಳನ್ನು ಮಾಡುತ್ತಾ ಇದ್ದರು. ಆದರೆ ಒಂದು ವ್ಯತ್ಯಾಸವಿದೆ, ದೇವರು ಕರೆದಾಗ ಏನು ಇಲ್ಲದೆ  ಇರುವುದನ್ನು ಕರೆದರು. ಆದರೆ ಯೇಸು ಕರೆಯುವಾಗ ತನ್ನ ಸ್ವಂತ ಜ್ಞಾನದಿಂದ, ಬಲದಿಂದ ಏನೇನು  ಮಾಡುತ್ತಿಲ್ಲ,  ತಂದೆಯಾದ ದೇವರು ಏನನ್ನು ಹೇಳುತ್ತಿದ್ದರೋ ಅದನ್ನೇ ಕೇಳಿಸಿಕೊಳ್ಳುತ್ತಿದ್ದರು,  ತಂದೆಯಾದ ದೇವರು ಏನನ್ನು ಮಾಡುತ್ತಿದ್ದರೋ ಅದನ್ನೇ ಮಾಡುತ್ತಿದ್ದರು. ಹಾಗಾದರೆ ಯೇಸು ಈ ಭೂಮಿಯಲ್ಲಿದ್ದು  ಓಡಾಡುವಾಗ, ಕರೆಯುವಾಗ, ಅವರು ಹೇಳುವಾಗ ಏನು ವ್ಯತ್ಯಾಸ ಅಂದರೆ  ತಂದೆಯಾದ ದೇವರು ಏನು ಹೇಳಿದರೋ, ತಂದೆಯಾದ ದೇವರು ಏನನ್ನು ಮಾಡಿದರೋ ಅದನ್ನೇ ಭೂಲೋಕದಲ್ಲಿ ಪ್ರಕಟಿಸಿದರು, ಅದನ್ನೇ ಮಾತಾಡಿದರು, ಅದನ್ನೇ ಕಾರ್ಯರೂಪಕ್ಕೆ ತಂದರು. 

 ಯೇಸು ಕ್ರಿಸ್ತನು ಶರೀರದಲ್ಲಿ ಮನುಷ್ಯನಾಗಿ ಈ ಭೂಲೋಕದಲ್ಲಿದ್ದಾಗ ತಂದೆಯಾದ ದೇವರು ಸೃಷ್ಠಿ ಮಾಡದೇ ಇರುವ ಕಾರ್ಯಗಳನ್ನು ಮಾಡಲಿಲ್ಲ. 

 ಯೇಸು ಈ ಭೂಮಿಯಲ್ಲಿ ಶರೀರವಾಗಿ ಬಂದ ಮೇಲೆ ಅವರು ಶರೀರದಲ್ಲಿ ಮಾಡಿರುವಂತಹ ಪ್ರತಿಯೊಂದು ಕಾರ್ಯಗಳು ಪವಿತ್ರಾತ್ಮನಿಂದ  ತುಂಬಿ, ಪವಿತ್ರಾತ್ಮನ ಪ್ರೇರೇಪಣೆಯಿಂದ ಮಾಡಿದ ಕಾರ್ಯಗಳೇ ಹೊರತು, ದೇವರಾಗಿ ಒಂದು ಕಾರ್ಯವನ್ನೂ ಮಾಡಲಿಲ್ಲ.

 ದೇವರೇ ಮಾಡಿದರು ಎಂದು ಹೇಳುವುದಕ್ಕೂ, ದೇವರ ಪ್ರೇರೇಪಣೆಯಿಂದ ಶರೀರ ಮಾಡಿತು ಎಂದು ಹೇಳುವುದಕ್ಕೂ ವ್ಯತ್ಯಾಸವಿದೆ. ಯೇಸು ಮಾಡಿದ್ದೆಲ್ಲವೂ ದೇವರ ಪ್ರೇರೇಪಣೆಯಿಂದ, ದೇವರ ಮಾತನ್ನು ಕೇಳಿ, ಅದರಂತೆ ಅವರ ಶರೀರ ಮಾಡಿದ ಕಾರ್ಯಗಳು. ದೇವರು ಆಕಾಶವನ್ನು ಉಂಟು ಮಾಡಿದ ಹಾಗೆ ಯೇಸು  ಈ ಭೂಮಿಯಲ್ಲಿ ಉಂಟು ಮಾಡಲಿಲ್ಲ. ಯೇಸು ಹೇಳಿದರು ನನ್ನ ತಂದೆ ನನಗೆ ಏನನ್ನು ಹೇಳುತ್ತಿದ್ದಾರೋ, ಅದನ್ನು ಕೇಳಿಸಿಕೊಂಡು ಅದರಂತೆ ನಾನು ಮಾತಾಡುತ್ತಿದ್ದೇನೆ. ತಂದೆ ಏನು ಮಾಡುತ್ತಿದ್ದಾರೋ ಅದರಂತೆ ನಾನು ಮಾಡುತ್ತಿದ್ದೇನೆ. ಅಂದರೆ ಯೇಸು ಪರಿಪೂರ್ಣವಾಗಿ ತಂದೆಯೊಂದಿಗೆ ಒಂದಾಗಿದ್ದರು. ತಂದೆಯ  ಶಬ್ದಕ್ಕೆ ಕಿವಿಗೊಟ್ಟು ಅವರು ಏನನ್ನು ಹೇಳುತ್ತಿದ್ದರೋ ಅದರ ಹಾಗೆಯೇ   ಮಾಡುತ್ತಿದ್ದರು. ಹಾಗಾದರೆ ಏನು ವ್ಯತ್ಯಾಸ ಅಂದರೆ, ತಂದೆಯಾದ ದೇವರು ಕರೆದಾಗ ಇಲ್ಲದೆ  ಇರುವುದನ್ನು ಕರೆದರು, ಯೇಸು ಕರೆದಾಗ ತಂದೆಯಾದ ದೇವರು ಜಗದುತ್ಪತ್ತಿಗಿಂತ ಮೊದಲೇ ಮನುಷ್ಯನಿಗೋಸ್ಕರ  ಮಾಡಿ ಮುಗಿಸಿರುವ ಕಾರ್ಯಗಳನ್ನು  ಕರೆದರು.

ದೇವರು ಜಗದುತ್ಪತ್ತಿಗಿಂತ ಮುಂಚೆ ಮನುಷ್ಯನಿಗೋಸ್ಕರ ಏನನ್ನು ಕರೆದರೋ ಅದೇ ರೀತಿಯಾಗಿ ಇವತ್ತು ನಾವು  ಕರೆಯಬೇಕು. ನಮ್ಮ ಇಷ್ಟಕ್ಕೆ, ನಮ್ಮ ಸ್ವಾರ್ಥಕ್ಕೆ, ನನ್ನ ಒಂದು ಕಾರ್ಯ ಆಗಬೇಕು ಎಂದು ಕರೆಯುವ ಕಾರ್ಯಗಳು ನೆರವೇರುವುದಿಲ್ಲ. ಯಾವ ರೀತಿ ಯೇಸು ತಂದೆಯಾದ ದೇವರ ಜೊತೆ ಯಾವಾಗಲೂ ಒಂದಾಗಿದ್ದು ಅವರ ಮಾತನ್ನು ಕೇಳುತ್ತಿದ್ದರೋ, ತಂದೆ ಮಾಡುವ ಕಾರ್ಯಗಳನ್ನು ನೋಡುತ್ತಿದ್ದರೋ, ಆ ಕಾರ್ಯಗಳು ಶರೀರದ ಕಣ್ಣಿನಿಂದ ನೋಡುವ ಶರೀರದ ಕಾರ್ಯಗಳಲ್ಲ. ಅವರು ಆತ್ಮದಿಂದ ತುಂಬಿರುವುದರಿಂದ ಆತ್ಮದ ಕಣ್ಣುಗಳನ್ನು ತೆರೆದು ಆತ್ಮದ ಕಾರ್ಯಗಳ ಬಗ್ಗೆ ಆಲೋಚನೆಯನ್ನು ಕೊಡುವಾಗ, ದೇವರು ಯಾವ ಕಾರ್ಯಗಳನ್ನು ಮಾಡಬೇಕು, ಯಾವ ಕಾರ್ಯಗಳನ್ನು ಮಾತಾಡಬೇಕು ಎಂದು ತೋರಿಸುವುದನ್ನೇ ಮಾಡುತ್ತಿದ್ದರು ಮತ್ತು ಮಾತಾಡುತ್ತಿದ್ದರು. 

ಯೇಸು ಯಾವ ರೀತಿ ಕಾರ್ಯರೂಪಕ್ಕೆ ತಂದರು: 

ಯೇಸು ಎಲ್ಲವನ್ನು  ತಂದೆಯಾದ ದೇವರ ಉದ್ದೇಶದ ಪ್ರಕಾರ, ದೇವರು ಏನನ್ನು ಹೇಳುತ್ತಿದ್ದರೋ ಅದರಂತೆಯೇ ಮಾಡುತ್ತಿದ್ದರು. 

ಯೇಸು ಹೇಗೆ ಕರೆದರು?

ಯೇಸು ಮಾಡಿದ ಮೊದಲನೇ ಅದ್ಭುತ ನೀರನ್ನು ದ್ರಾಕ್ಷರಸವಾಗಿ ಮಾರ್ಪಡಿಸಿದ್ದು. 

ಇಲ್ಲದೆ ಇರುವುದನ್ನು ಕರೆದರು ಅಂದರೆ ಶರೀರದಲ್ಲಿ ಇಲ್ಲ, ಆದರೆ ಆತ್ಮದಲ್ಲಿ ಅದು ಇದೆ. ಈಗ ನನ್ನ ಕಣ್ಣಿಗೆ ಕಾಣುವ ರೂಪದಲ್ಲಿ ಇಲ್ಲ, ಆದರೆ ಅದು ಈಗಾಗಲೇ ಆತ್ಮದ ಮಂಡಲದಲ್ಲಿ ದೇವರು ನೆರವೇರಿಸಿರುವ ಕಾರ್ಯ. ಈ ಭಾವನೆಯಿಂದ ನಾವು ಕರೆಯಬೇಕಾಗಿದೆ.

 ದೇವರು ನಮಗೆ ಎಲ್ಲಾ ಕಾರ್ಯಗಳನ್ನು ಸುಲಭವಾಗಿ ಮಾಡಿಕೊಟ್ಟರು. ದೇವರು ಹೇಳುತ್ತಿದ್ದಾರೆ - ನಾನು ಕರೆಯಬೇಕಾದರೆ ಯಾವ ಕಾರ್ಯವು ಇರಲಿಲ್ಲ,  ಅದಕ್ಕೆ ಎಲ್ಲವನ್ನು ಕರೆದು ವಾಕ್ಯದ ರೂಪದಲ್ಲಿ ಆತ್ಮದ ಮಂಡಲದಲ್ಲಿ ಇಟ್ಟಿದ್ದೇನೆ. ಈಗ ನನ್ನ ಹಾಗೆ ನೀನು ಕರೆ, ಈ ಭೂಲೋಕದಲ್ಲಿ, ನೀನು ಕಾಣುವ ರೂಪದಲ್ಲಿ, ಕಾಣುವ ಮಂಡಲದಲ್ಲಿ ಇದ್ದೀಯ. ಈಗ ನೀನು ಕರೆಯುವಾಗ ಕಾಣದೆ ಇರುವ ಮಂಡಲದಿಂದ ಕಾಣುವ ಹಾಗೆ ಪ್ರಕಟವಾಗುವುದು. ಇದನ್ನೇ ಯೇಸು ಕೂಡ ಆ ಮದುವೆ ಮನೆಯಲ್ಲಿ  ಎಲ್ಲಾ ದ್ರಾಕ್ಷರಸ ಖಾಲಿ ಆಯಿತು, ಜಾರೆಗಳನ್ನು ತರಿಸಿ, ಅದರಲ್ಲಿ ನೀರನ್ನು ತುಂಬಿಸಿ, ಈಗ ಆ ನೀರನ್ನು ಅತಿಥಿಗಳಿಗೆ ಹೋಗಿ ಕೊಡಿರಿ ಎಂದು ಹೇಳಿದರು. ಈಗ ಯೇಸು ಆ ಮಾತನ್ನು ಹೇಳುವಾಗ ಅಲ್ಲಿ ದ್ರಾಕ್ಷರಸವಿಲ್ಲ. ಈಗ ನೀವು ಹೋಗಿ ಕೊಡಿ ಎಂದು ಸುಲಭವಾಗಿ  ಹೇಳುತ್ತಿದ್ದಾರೆ ಅಂದರೆ ದ್ರಾಕ್ಷರಸವನ್ನು ಕೊಡಿರಿ ಎಂಬುದಾಗಿ ಅರ್ಥ. 

ಆದ್ದರಿಂದ ನೀವು ಇಲ್ಲದರ ಬಗ್ಗೆ ಮಾತನಾಡಬೇಡಿ, ಯಾವುದು ಇಲ್ಲವೋ ಅದನ್ನು ಕರೆಯಿರಿ, ಅದನ್ನು ಹೇಳಿರಿ. ಈಗ ದ್ರಾಕ್ಷರಸವನ್ನು ಹೋಗಿ ಕೊಡಿರಿ ಎಂದು ಹೇಳುವಾಗ ಇಲ್ಲದೆ ಇರುವುದನ್ನು ಇರುವ ಹಾಗೆ ಕರೆದರು. ಈಗ ದ್ರಾಕ್ಷರಸ ಇಲ್ಲ, ಆದರೆ ಈಗ ದ್ರಾಕ್ಷರಸವನ್ನು ಕೊಡಿರಿ ಎಂದು ಹೇಳುವಾಗ ಅಲ್ಲಿ ದ್ರಾಕ್ಷರಸ ಉಂಟಾಯಿತು. ಆತನು ಕರೆದನು, ಅದು ಕಾರ್ಯರೂಪಕ್ಕೆ ಬಂತು ಅಥವಾ ಆತನು ಕರೆದನು ಅದು ಕಾಣುವ ರೂಪಕ್ಕೆ ಬಂತು. 

 ಇನ್ನೊಂದು ವ್ಯಕ್ತಿಗೆ ಕೈ ಇರಲಿಲ್ಲ ಆದರೆ ಯೇಸು ಆ  ಕೈ ಇಲ್ಲದ ಅಂಗವಿಕಲನಿಗೆ, ನಿನ್ನ ಕೈ ಚಾಚು. ಯೇಸು ಶರೀರದ ಕಣ್ಣಿನಿಂದ ನೋಡುವಾಗ ಅವನ ಕೈಗೆ ಸಮಸ್ಯೆಯಿದೆ. ಆತನ ಕೈಯನ್ನು ಚಾಚಲು ಆಗುವುದಿಲ್ಲ ಎಂದು ಗೊತ್ತು, ಈಗ ಅಲ್ಲಿ ಇಲ್ಲದೆ ಇರುವುದನ್ನು ಕರೆಯುತ್ತಿದ್ದಾರೆ. ಆ ಮನುಷ್ಯನಿಗೆ ಕೈ ಇಲ್ಲ, ಕೈ ಚಾಚುವುದಕ್ಕೆ  ಆಗುವುದಿಲ್ಲ ಎಂದು ಇರುವುದನ್ನು ಹೇಳುತ್ತಿಲ್ಲ. ಅವನಿಗೆ ಇಲ್ಲದೆ ಇರುವುದನ್ನು ಅಂದರೆ ಅವನಿಗೆ ಕೈಯಿಲ್ಲ, ಆದ್ದರಿಂದ ಕೈ ಚಾಚು ಎಂದು ಕರೆಯುತ್ತಿದ್ದಾರೆ.

ಕೈಯನ್ನು ಚಾಚುವುದಕ್ಕೆ ಆಗದೆ ಇರುವ ಸ್ಥಳದಲ್ಲಿ ಕೈಯನ್ನು ಚಾಚು ಅಂದ ಕೂಡಲೇ ಚಾಚಲೂ ಆಗದೇ ಇರುವ ಕೈಯನ್ನು ಚಾಚಿದರು. ಅವರು ಕರೆದರು, ಕರೆದ ಹಾಗೆ ಕಾರ್ಯಗಳು ಉಂಟಾಯಿತು. ಇದೇ ರೀತಿ ಯೇಸು  ಇಲ್ಲದೇ ಇರುವ ಅನೇಕ ಕಾರ್ಯಗಳನ್ನು ಕಾಣುವ ರೂಪದಲ್ಲಿ ತಂದರು.


ಅಂಜೂರದ ಮರಕ್ಕೆ ಯೇಸುವಿನ ಶಬ್ದ ಕೇಳಿಸಿತು, ಸಮುದ್ರದ ನೀರಿಗೆ ಯೇಸುವಿನ ಶಬ್ದ ಕೇಳಿಸಿತು, ಸತ್ತವನಿಗೆ ಯೇಸುವಿನ ಶಬ್ದ ಕೇಳಿಸಿತು, ರೋಗದಲ್ಲಿದ್ದವನಿಗೆ ಯೇಸುವಿನ ಶಬ್ದ ಕೇಳಿಸಿತು, ಕುರುಡನಿಗೆ, ಕುಷ್ಠ ರೋಗಿಗೆ ಯೇಸುವಿನ ಶಬ್ದ ಕೇಳಿಸಿತು. 


ಯೇಸು ಕರೆದದ್ದೆಲ್ಲ ಉಂಟಾಗಲು ಕಾರಣಗಳು :

1. ತಂದೆಯಾದ ದೇವರೊಂದಿಗೆ ಅನ್ಯೋನ್ಯತೆಯಿಂದ, ಐಕ್ಯತೆಯಿಂದ ಒಂದಾಗಿದ್ದರು. ತಂದೆ ಇಲ್ಲದೆ ಯೇಸು ಇಲ್ಲ. 

2. ತಂದೆಯಾದ ದೇವರೊಂದಿಗೆ ಒಂದಾಗಿರುವುದರಿಂದ, ಆತನೇ ಆಧಾರವಾಗಿರುವುದರಿಂದ ಆತನ ಮೇಲೆ ನಂಬಿಕೆ ಮತ್ತು ಧೈರ್ಯ ಉಂಟಾಗುತ್ತದೆ. ಆಗ ಅಧಿಕಾರದಿಂದ ಕರೆಯುತ್ತಿದ್ದರು. 

3. ಯೇಸುವಿನ ಆತ್ಮ, ಪ್ರಾಣ, ಶರೀರ ದೇವರ ಜೊತೆ ಐಕ್ಯತೆಯಿಂದ ಇತ್ತು. ಮಿತಿ ಇಲ್ಲದ ಪವಿತ್ರಾತ್ಮನಿಂದ ಪರಿಪೂರ್ಣವಾಗಿ ತುಂಬಿರುವುದರಿಂದ ಅವರ ಆತ್ಮ ಯಾವಾಗಲೂ ತಂದೆಯೊಂದಿಗೆ ಐಕ್ಯತೆಯಿಂದ ಇರಲು ಅನುಕೂಲವಾಗಿತ್ತು. ಪ್ರಾಣ ಯಾವಾಗಲೂ ತಂದೆಯಾದ ದೇವರೊಂದಿಗೆ ಐಕ್ಯತೆಯಿಂದ ಇರುವುದನ್ನು ನಂಬಲು ಸಾಧ್ಯವಾಯಿತು. ನಂಬಿಕೆಯಿಂದ ದೇವರ ಮಾತುಗಳನ್ನು ಹೇಳಲು ಸಾಧ್ಯವಾಯಿತು. ಅದರಂತೆ ಕರೆಯುವಾಗ ಶರೀರದ ಮೂಲಕ ಎಲ್ಲವೂ ಪ್ರಕಟವಾಯಿತು.


ಯೇಸು ತಂದೆಯೊಂದಿಗೆ ಐಕ್ಯತೆಯಿಂದ ಇದ್ದರು. ನಂಬಿಕೆ ಮತ್ತು ಅಧಿಕಾರದಿಂದ ಮಾತಾಡಿದರು. ಆತ್ಮ ಮತ್ತು ಪ್ರಾಣ ಅದರಂತೆಯೇ ನಡೆಯಿತು. ಅದನ್ನೇ ಶರೀರ ಪ್ರಕಟಿಸಿತು.

ಆದ್ದರಿಂದ ನೀವು ಕರೆಯುವಾಗ ನಿಮ್ಮ ಮನಸ್ಥಿತಿ ಯಾವ ನಂಬಿಕೆ, ಯಾವ ಭಾವನೆಯಲ್ಲಿದೆ ಎನ್ನುವುದು ತುಂಬಾ ಮುಖ್ಯ.

ಯೇಸುವಿನ ಹಾಗೆ ಕರೆಯುವುದಕ್ಕೆ ಅರ್ಹತೆ ಏನು? 

ಆತ್ಮಭರಿತರಾಗಿ, ಸತ್ಯ ವಾಕ್ಯವನ್ನು ಪದೇ ಪದೇ ಕೇಳಿ, ಅದೇ ಪ್ರಜ್ಞೆ, ಅದೇ ಪ್ರಕಟಣೆ, ಅದೇ ಭಾವನೆಯಲ್ಲಿ ನಡೆಯುವಾಗ, ದೇವರು ಮಾತಾಡಿದ್ದನ್ನು ಕೇಳಿಸಿಕೊಂಡು ಮಾತಾಡುತ್ತಿದ್ದೇನೆ ಎಂಬ ನಂಬಿಕೆಯಿಂದ ತುಂಬಿ, ಕರೆಯುತ್ತಿರುವುದು ನಾವೇ ಅಲ್ಲ, ನಮ್ಮ ಬಲ, ಸಾಮರ್ಥ್ಯದಿಂದ ಅಲ್ಲ. ನಮ್ಮ ಒಳಗಡೆ ಇರುವ ಯೇಸು ಕರೆಯುತ್ತಿದ್ದಾರೆ. ಅವರು ಬಲ, ಶಕ್ತಿ ಮತ್ತು ಸಾಮರ್ಥ್ಯದಿಂದ ತುಂಬಿದವರಾಗಿರುವುದರಿಂದ ನಮ್ಮ ಮೂಲಕ ಅವರು ಕರೆಯುವಾಗ ಇಲ್ಲದೇ ಇರುವುದು ಉಂಟಾಗುವುದು ಎಂಬ ಭಾವನೆಯಿಂದ ಕರೆಯಬೇಕು.

ದೇವರು ಮನುಷ್ಯ ಅನುಭವಿಸಲಿ ಎಂದು ಈ ಭೂಮಿಯ ಮೇಲೆ ಎಲ್ಲವನ್ನು ಸೃಷ್ಟಿಸಿದ್ದಾರೆ. ಆದರೆ ಮನುಷ್ಯ ಮಾಡುವ ತಪ್ಪುಗಳ ನಿಮಿತ್ತವಾಗಿ ದೇವರು ಮಾಡಿರುವ ನಿಯಮದಲ್ಲಿ ಜೀವಿಸದೇ ಇರುವಾಗ ಇಕ್ಕಟ್ಟಿನಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ. ಆ ಇಕ್ಕಟ್ಟಿನಿಂದ ನಮ್ಮನ್ನು ರಕ್ಷಿಸುವುದಕ್ಕೆ ದೇವರು ಒಂದು ಅದ್ಭುತವನ್ನು ಮಾಡುತ್ತಾರೆ. ಅದ್ಭುತ ಅಂದರೆ ಎಲ್ಲಿ ಸೃಷ್ಠಿ ಮನುಷ್ಯನಿಗೆ ಅನುಕೂಲವಾಗಿಲ್ಲವೋ ಅಲ್ಲಿ ನಾನೇ ಸೃಷ್ಠಿಗಿಂತ  ದೊಡ್ಡವನು, ನಾನೇ ಅದನ್ನು ಉಂಟು ಮಾಡಿದ್ದೇನೆ, ಅದು ನನ್ನ ನಿಯಂತ್ರಣದಲ್ಲಿದೆ ಎಂದು ತೋರಿಸುವುದಕ್ಕಾಗಿ ದೇವರು ಅದ್ಭುತವನ್ನು ಮಾಡುತ್ತಾರೆ.


ನಿಮ್ಮಲ್ಲಿ ಸಮಸ್ಯೆ ಹಾಗೆ ಇದೆ ಅಂದರೆ ದೇವರು ಕರೆಯುವ ರೀತಿಯಲ್ಲಿ ಕರೆಯುತ್ತಿಲ್ಲ. ಏನು ಇಲ್ಲವೋ ಅದನ್ನೇ ಮಾತನಾಡುತ್ತಿದ್ದೀರಿ! 10 ರೂಪಾಯಿ ಇಲ್ಲ, ಕೆಲಸ ಸರಿ ಇಲ್ಲ, ಎಂದು ಕೊರತೆಯನ್ನೇ ಮಾತನಾಡುತ್ತಿದ್ದೀರಿ!ಯಾವ ಪರಿಸ್ಥಿತಿ ಇದೆಯೋ ಅದನ್ನೇ ಮಾತನಾಡುತ್ತಿದ್ದೀರಿ, ದೇವರ ನಿಯಮದ ಪ್ರಕಾರ ನೀವು ಕರೆಯುತ್ತಿಲ್ಲ. ದೇವರು ಇಲ್ಲದಿರುವುದನ್ನು ಕರೆದರು.  ನಿಮ್ಮ ಸಮಸ್ಯೆಗಳು ತಾತ್ಕಾಲಿಕವಾದದ್ದು , ನಿತ್ಯ ನಿತ್ಯವಾಗಿರುವುದಲ್ಲ ನಿರಂತರವಾಗಿರುವುದೂ ಅಲ್ಲ.


ಕಾಲು ನೋವು ಇದೆ ಹಾಗಾದರೆ ನಾವು ಸುಳ್ಳು ಹೇಳಬೇಕಾ ಪಾಸ್ಟರ್ ಅನ್ನುತ್ತೀರಾ!

ನೋವಿಲ್ಲ ಎಂದು ಸುಳ್ಳು ಹೇಳಬೇಕು ಎಂದು ಹೇಳುತ್ತಿಲ್ಲ. ಶರೀರದ ಪರಿಸ್ಥಿತಿ ನಿಜ , ಆದರೆ ಅದು ಸತ್ಯ ಅಲ್ಲ. ಅಲ್ಲಿ ನೋವು ಇದೆ, ಸ್ವಸ್ಥತೆ ಇಲ್ಲ. ನೋವು ಇರುವ ಜಾಗದಲ್ಲಿ ಸ್ವಸ್ಥತೆಯನ್ನು ಕರೆಯಿರಿ ಎಂದು ಹೇಳುತ್ತಿದ್ದೇನೆ. ಯೇಸುವಿನ ಗಾಯದಿಂದ ನಾನು ಗುಣ ಹೊಂದಿದ್ದೇನೆ ಎಂದು ಕರೆಯುತ್ತೇನೆ, ತಂದೆಯಾದ ದೇವರು ಆತ್ಮ ಮಂಡಲದಲ್ಲಿ ಮಾಡಿರುವುದನ್ನು ನಾನು ಕರೆಯುತ್ತಿದ್ದೇನೆ. ಶರೀರದಲ್ಲಿ ಈಗ ಇಲ್ಲ, ಆದರೆ ಆತ್ಮ ಮಂಡಲದಲ್ಲಿ ಇದೆ. ಶರೀರಕ್ಕೆ ಸ್ವಸ್ಥತೆಯನ್ನು ಕರಿಯುತ್ತಿದ್ದೇನೆ ಎಂದು ನಂಬಿರಿ. ಆಗ ಸ್ವಸ್ಥತೆ ಉಂಟಾಗಲೇಬೇಕು.ಅದು ಹಾಗೆ ಆಗುವುದು. 

ಯೇಸು ಸತ್ತ ಲಾಜರನಿಗೆ ಎದ್ದು ಬಾ ಎಂದು ಕರೆದಾಗ ಮರಣವೇ  ಜೀವವಾಗಿ ಎದ್ದು ಬಂದನು. 

   

ಪ್ರವಾದನೆಯ ವಾಕ್ಯ :

ಯೋಬನ ಗ್ರಂಥ : 22:28 - ಯಾವದನ್ನು ಸಂಕಲ್ಪಿಸಿಕೊಳ್ಳುವಿಯೋ ಅದು ನಿನಗೆ ನೆರವೇರುವದು,

ಬೆಳಕು ನಿನ್ನ ಮಾರ್ಗಗಳಲ್ಲಿ ಪ್ರಕಾಶಿಸುವದು.

ಪ್ರವಾದನೆಯ ಘೋಷಣೆ

ನಾನು ದೇವರ ವಾಕ್ಯವನ್ನು ನನ್ನ ಆತ್ಮದಲ್ಲಿ ಸ್ವೀಕರಿಸುತ್ತೇನೆ; ಆತನ ವಾಗ್ದಾನಗಳು ನನ್ನಲ್ಲಿ ಜೀವಂತವಾಗಿವೆ. ನನ್ನ ಜೀವನದುದ್ದಕ್ಕೂ ಕರ್ತನು ಹೇಳಿದ ಪ್ರತಿಯೊಂದು ಮಾತು ಕೂಡ ವಿಳಂಬವಿಲ್ಲದೆ ನೆರವೇರುತ್ತದೆ ಎಂದು ನಾನು ಘೋಷಿಸುತ್ತೇನೆ.

ನನ್ನ ಮನಸ್ಸು ನವೀಕರಿಸಲ್ಪಟ್ಟಿದೆ, ನನ್ನ ಆಲೋಚನೆಗಳು ಸ್ವರ್ಗದೊಂದಿಗೆ ಹೊಂದಿಕೊಂಡಿವೆ ಮತ್ತು ನಾನು ಅನುಮಾನ ಅಥವಾ ಭಯದೊಂದಿಗೆ ಒಪ್ಪಲು ನಿರಾಕರಿಸುತ್ತೇನೆ. ದೇವರು ಹೇಳಿದ್ದು ನನ್ನ ವಾಸ್ತವ ಎಂದು ನಾನು ನಂಬುತ್ತೇನೆ.

ನಾನು ನನ್ನ ದೇಹಕ್ಕೆ ಗುಣಪಡಿಸುವಿಕೆಯನ್ನು ಆದೇಶಿಸುತ್ತೇನೆ ಮತ್ತು ಕರೆಯುತ್ತೇನೆ, ನನ್ನ ಕೈಗಳಿಗೆ ಪೂರೈಕೆಯನ್ನು ಕರೆಯುತ್ತೇನೆ, ನನ್ನ ಕುಟುಂಬಕ್ಕೆ ಶಾಂತಿಯನ್ನು ಕರೆಯುತ್ತೇನೆ, ನನ್ನ ಕೆಲಸಕ್ಕೆ ಅನುಗ್ರಹವನ್ನು ಕರೆಯುತ್ತೇನೆ ಮತ್ತು ನಾನು ಬಿತ್ತಿದ ಪ್ರತಿಯೊಂದು ಬೀಜಕ್ಕೆ ಗುಣಾಕಾರವನ್ನು ಕರೆಯುತ್ತೇನೆ. ಕಾಣದಿರುವುದು ಈಗ ದೇವರ ವಾಕ್ಯದ ಶಕ್ತಿಯಿಂದ ಪ್ರಕಟವಾಗುತ್ತಿದೆ.

ನಾನು ನನ್ನ ಜೀವನದಲ್ಲಿ ದೇವರ ವಾಗ್ದಾನಗಳನ್ನು ಅಸ್ತಿತ್ವಕ್ಕೆ ಕರೆಯುತ್ತೇನೆ - ನಾನು ಫಲಪ್ರದ, ನಾನು ಬಲಶಾಲಿ, ನಾನು ಆಶೀರ್ವದಿಸಲ್ಪಟ್ಟಿದ್ದೇನೆ, ನಾನು ಸಮೃದ್ಧನಾಗಿದ್ದೇನೆ ಮತ್ತು ನಾನು ಯೇಸುವಿನ ಹೆಸರಿನಲ್ಲಿ ದೈವಿಕ ಹೆಚ್ಚಳದಲ್ಲಿ ನಡೆಯುತ್ತೇನೆ!


ಫಾಲೋ ಮಾಡಿ, ಲೈಕ್ ಮಾಡಿ, ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ!




  
           
SCAN FOR THE LOCATION 

For Prayer Request WhatsApp: 9880516003

GOOGLE MEET LINK - TO JOIN MORNING PRAYER @6 AM from MONDAY TO FRIDAY



Comments

  1. Powerful revelation for October month🔥🔥🔥🎉🎉🎉🥳🥳🥳

    ReplyDelete
  2. Thank you 💕 Jesus for this wonderful truth. We are experiencing your blessings 😇😇😇🎊🎊🎊

    ReplyDelete
  3. I receive every Word of the declaration and Manifest in my life. Amen!

    ReplyDelete
  4. Yes amen I received in My spirit of mighty name of Jesus 🙏🙏🙏💓💓💓💓

    ReplyDelete
  5. Powerful revolution for October month

    ReplyDelete
  6. Yes Amen I received it in my spirit in the mighty name of Jesus name Amen 🔥🔥🔥

    ReplyDelete
  7. Power full revelation Father 🔥🔥🔥🔥👏👏👏👏

    ReplyDelete
  8. This comment has been removed by the author.

    ReplyDelete
  9. Wonderful WORD!! LIFE CHANGING WONDERFUL WORD!!🥰🎊🥳🎉

    ReplyDelete

Post a Comment

Popular posts from this blog

Testimony #701 - ಆ ಸಮಯದಲ್ಲಿ ನನಗೆ ಆರೋಗ್ಯ ತುಂಬಾ ಹದಗೆಟ್ಟಿತ್ತು

2025 ನೇ ವರ್ಷ ಸೆಪ್ಟೆಂಬರ್ ತಿಂಗಳಿಗೆ ದೇವರು ಕೊಟ್ಟ ಪ್ರವಾದನೆಯ ವಾಗ್ದಾನವು "Deliver" (ಕೊಡಲ್ಪಡುವುದು)